ಆತ್ಮಹತ್ಯೆ ಮಾಡಿಕೊಂಡಿರುವ ಗೌತಮ್ ಗುತ್ತಿಗೆದಾರನೇ ಅಲ್ಲ; ಇದು ಬಿಜೆಪಿಯವರ ಸೃಷ್ಟಿ: ಮೃತನ ತಂದೆ, ಸಂಬಂಧಿಕರು ಹೇಳಿದ್ದೇನು?
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಅವರ ಪುತ್ರ ಗೌತಮ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಬಗ್ಗೆ ಕೆಲ ಊಹಾಪೋಹಗಳು ಕೇಳಿಬಂದಿದ್ದು, ಇದೀಗ ಗೌತಮ್ ತಂದೆ ದೊಡ್ಡಯ್ಯ ಮತ್ತು ಅವರ ಸಂಬಂಧಿಕರು ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆ ದಾರರು ಬಿಲ್ ಪಾವತಿ ವಿಳಂಬದ ಬಗ್ಗೆ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವ ಬೆನ್ನಲ್ಲೇ ಇಂದು ( ಗುರುವಾರ) ಕೆಲವು ಸುದ್ದಿ ಮಾಧ್ಯಮಗಳು ʼʼಕಾಮಗಾರಿ ಬಿಲ್ ಸಿಗದಿದ್ದಕ್ಕೆ ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ವರದಿ ಮಾಡಿತ್ತು.
ಅಲ್ಲದೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಜ್ಯ ಬಿಜೆಪಿಯ ಟ್ವಿಟರ್ ಖಾತೆಯಲ್ಲಿ ʼಕಾಮಗಾರಿಯ ಬಿಲ್ ಕೇಳಿದ್ದಕ್ಕೆ ಬೇಜವಾಬ್ದಾರಿಯ ಮಾತನಾಡಿದ ಡಿಕೆ ಶಿವಕುಮಾರ್ ಅವರೇ ಈ ಘಟನೆಗೆ ನೇರ ಹೊಣೆʼ ಎಂದು ಆರೋಪಿಸಿ ಪೋಸ್ಟ್ ಮಾಡಲಾಗಿದೆ. ಆದರೆ ಮೃತ ಗೌತಮ್ ʼʼಗುತ್ತಿಗೆದಾರನೇ ಅಲ್ಲʼʼ ಎಂದು ಆತನ ತಂದೆ ಮತ್ತು ಭಾವ ಸ್ಪಷ್ಟನೆ ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್ ಹೀಗಿದೆ....
ʼʼಇದು ಜೀವ ತೆಗೆಯುವ ಸರ್ಕಾರ! ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರ , ನೌಕರನ ಆತ್ಮಹತ್ಯೆ ಎಂದು ಪ್ರತಿ ದಿನ ಕೇಳುತ್ತಲೇ ಇದ್ದೇವೆ. ಇಂದು ಬಿಬಿಎಂಪಿ ಗುತ್ತಿಗೆದಾರನ ಆತ್ಮಹತ್ಯೆ! ಕಾಮಗಾರಿಯ ಬಿಲ್ ಕೇಳಿದ್ದಕ್ಕೆ ಬೇಜವಾಬ್ದಾರಿಯ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆ. ಕಾಂಗ್ರೆಸ್ಸಿಗರೇ, ಇನ್ನೆಷ್ಟು ಬಲಿ ಬೇಕು?ʼʼ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಬಿಜೆಪಿ ಟ್ವೀಟ್ ಹೀಗಿದೆ....
ʼʼಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಲೂಟಿಗಿಳಿದ ಪರಿಣಾಮವೇ ಇಂದು ಬಿಬಿಎಂಪಿ ಗುತ್ತಿಗೆದಾರ ಗೌತಮ್ ಕಾಮಗಾರಿ ಬಿಲ್ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕೊಡಲ್ಲ, ಆಣೆ ಮಾಡೋಲ್ಲ, ಪ್ರತಿಭಟನೆ ಮಾಡಿದ್ರೆ ಬ್ಲ್ಯಾಕ್ ಮೇಲ್ ಎನ್ನುತ್ತ ಬೇಜವಾಬ್ದಾರಿಯಿಂದ ವರ್ತಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದಕ್ಕೆ ನೇರ ಹೊಣೆ..! ಆಡಳಿತ ನಡೆಸಲು ಕಾಂಗ್ರೆಸ್ ಅಸಮರ್ಥ ಎನ್ನುವುದು ಸಾಬೀತಾಗಿದೆ. ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ!ʼʼ ಎಂದು ಬಿಜೆಪಿ @BJP4Karnataka ಟ್ವೀಟ್ ಮಾಡಿದೆ.
ಗೌತಮ್ ಗುತ್ತಿಗೆದಾರ ಅಲ್ಲ!
ಈ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾರುವ ಗೌತಮ್ ಅವರ ತಂದೆ ದೊಡ್ಡಯ್ಯ, ʼಆತ ಯಾವುದೇ ಕಂಟ್ರಾಕ್ಟರ್ ಕೆಲಸ ಮಾಡುತ್ತಿರಲಿಲ್ಲ. ಕಳೆದ 3-4 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಮಗೂ ಗೊತ್ತಾಗುತ್ತಿಲ್ಲ. ಹುಡುಗರ ಜೊತೆ ಓಡಾಡಿಕೊಂಡಿದ್ದ. ಆತನಿಗೆ ಮದುವೆ ಮಾಡಲು ಹೆಣ್ಣು ನೋಡುತ್ತಿದ್ದೆವುʼ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಗೌತಮ್ ಅವರ ಭಾವ ಮಾತನಾಡಿ, ʼʼನಾನು ಸ್ಪಷ್ಟವಾಗಿಯೇ ಹೇಳುತ್ತೇನೆ, ಭಾಮೈದ ಗುತ್ತಿಗೆದಾರನಲ್ಲ. ಆತನಿಗೆ ಬಿಲ್ ಬರಬೇಕಾಗಿರಲಿಲ್ಲ. ಇದು ಬಿಜೆಪಿಯವರು ಮಾಡಿರುವ ಕೆಲಸ. ಮದುವೆ ಮಾಡಲು ನಿರ್ಧರಿಸಿ ಹುಡುಗಿ ಹುಡುಕುತಿದ್ದೇವು. ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದʼʼ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ದೊಡ್ಡಯ್ಯ ಅತ್ತಿಗುಪ್ಪೆ ವಾರ್ಡಿನ ಮಾಜಿ ಸದಸ್ಯರಾಗಿದ್ದು, ಗೌತಮ್ ಮೂರನೇ ಮಗ. ಪ್ರತಿ ದಿನ ತಡವಗಿ ಮನೆಗೆ ಬರುತ್ತಿದ್ದ ಗೌತಮ್, ಬುಧವಾರ ರಾತ್ರಿ ಊಟಕ್ಕೆ ಕರೆದಾಗ ಆತ ಬಾಗಿಲು ತೆರೆದಿಲ್ಲ. ಆ ಬಳಿಕ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.