ರಾಜ್ಯದಿಂದ ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Update: 2024-08-04 12:47 GMT

Photo:X/@BJP4Karnataka

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಭ್ರಷ್ಟ ಕಾಂಗ್ರೆಸ್ ಸರಕಾರವು ಹಣವನ್ನು ಲೂಟಿ ಮಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ರವಿವಾರ ಮೈಸೂರು ಚಲೋ ಪಾದಯಾತ್ರೆಯ ಎರಡನೇ ದಿನ ಬಿಡದಿಯಲ್ಲಿ ಪಾದಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದ ಅವರು, ದೀನದಲಿತರು, ಪರಿಶಿಷ್ಟ ಜಾತಿ, ಪಂಗಡದ ಪರವಾಗಿ, ಬಡಜನರ ಪರವಾಗಿ ಪ್ರಶ್ನಿಸಿದ ವಿಪಕ್ಷಕ್ಕೆ ಉತ್ತರ ಕೊಡಬೇಕಾದ ಆಡಳಿತ ಪಕ್ಷದವರು ವಿಪಕ್ಷಕ್ಕೇ ಮರುಪ್ರಶ್ನೆ ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿಯವರೇ, ನೀವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಹಿಂದದ ಅಭಿವೃದ್ಧಿ ಹೆಸರಿನಿಂದ ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದನ್ನು ಸ್ವತಃ ಮುಖ್ಯಮಂತ್ರಿಗಳಾದ ನೀವೇ ಸದನದಲ್ಲಿ ಒಪ್ಪಿಕೊಂಡಿದ್ದೀರಿ. ವಾಲ್ಮೀಕಿ ನಿಗಮದಲ್ಲಿ ಹಗರಣ ಆದುದನ್ನು ಒಪ್ಪಿಕೊಂಡಿದ್ದೀರಲ್ಲವೇ? ನೀವು ನಮಗೆ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರದ ದರ್ಪ, ಅಧಿಕಾರದ ಅಹಂನಿಂದ ಉಪ ಮುಖ್ಯಮಂತ್ರಿಯವರು ಮಾತನಾಡುತ್ತಿದ್ದಾರೆ. ಅವರು ರಾಜ್ಯದ ಜನತೆಗೆ ಉತ್ತರ ಕೊಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಡದಿಯಲ್ಲಿರುವ ಟೊಯೊಟಾ ಫ್ಯಾಕ್ಟರಿ ಹೊರರಾಜ್ಯಕ್ಕೆ ಹೋಗುವ ಸ್ಥಿತಿ ಉದ್ಭವವಾಗಿದೆ. ಹೊಸ ಉದ್ಯಮಗಳು, ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿಮ್ಮ ದುರಹಂಕಾರದ ನಡವಳಿಕೆಯಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಲೂಟಿ ಮಾಡುತ್ತ ಕುಳಿತಿದ್ದೀರಿ ಎಂದು ಟೀಕಿಸಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡುವ ದಿನಗಳು ಹತ್ತಿರವಿದ್ದು, ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ, ತಮ್ಮ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ ಎಂದು ಮೊಂಡುವಾದ ಮಾಡುತ್ತಿದ್ದರು. ಇವತ್ತು ಅವರು ಹಗರಣಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಪಿಎಸ್ಸೈ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿಂದಿನ ಕಾರಣ ಜನತೆಗೆ ಗೊತ್ತಿದೆ. ಆಡಳಿತ ಪಕ್ಷದ ಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬಂತಾಗಿದೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಸತೀಶ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಮಂಜುನಾಥ್, ಶಾಸಕ ಕೃಷ್ಣಪ್ಪ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಗೋಪಾಲಯ್ಯ, ಮಹೇಶ್ ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News