ಸಾಗರ | ಬಾಲಕಿ ಅನುಮಾನಾಸ್ಪದ ಸಾವು ಪ್ರಕರಣ: ವಸತಿ ಶಾಲಾ ಮುಖ್ಯಸ್ಥನಿಗೆ ಷರತ್ತುಬದ್ಧ ಜಾಮೀನು
ಸಾಗರ : ಇತ್ತೀಚೆಗೆ ತಾಲೂಕಿನ ವರದಹಳ್ಳಿ ರಸ್ತೆಯಲ್ಲಿರುವ ವಸತಿ ಶಾಲೆಯೊಂದರಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಫಾಸ್ಟ್‍ಟ್ರ್ಯಾಕ್ ಸೆಷನ್ಸ್ ನ್ಯಾಯಾಲಯ (1) (ಪೊಕ್ಸೋ)ರಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ವಸತಿ ಶಾಲೆ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ನೀಡಿ ಅವರನ್ನು ಬಿಡುಗಡೆಗೊಳಿಸಿ, ಆದೇಶಿಸಿದ್ದಾರೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ಆಪಾದಿತರ ಪರ ವಾದ ಮಂಡಿಸಿದ ಅಶೋಕ್ ಭಟ್, ಮೃತ ವಿದ್ಯಾರ್ಥಿನಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ತನ್ನೊಂದಿಗೆ ವಸತಿ ಶಾಲೆಯಲ್ಲಿದ್ದ ಇತರ ಮಕ್ಕಳೊಂದಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ, ಉಳಿದ ಮಕ್ಕಳು ಮೃತರ ತಾಯಿಗೆ ಹೇಳಿ, ಅವರಿಂದ ದೂರು ದಾಖಲಿಸಿದ್ದರು. ಶಾಲಾ ಮುಖ್ಯಸ್ಥರು ವಿದ್ಯಾರ್ಥಿನಿಯ ಕೈ-ಕಾಲಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆ ಸಹಪಾಠಿಗಳಿಗೆ ಹೇಳಿದ ಯಾವುದೇ ದಾಖಲೆಗಳಿಲ್ಲ ಎಂದೂ ತಿಳಿಸಿದ್ದಾರೆ.
ಮೃತ ಬಾಲಕಿಯ ತಾಯಿಯ ದೂರಿನನ್ವಯ ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೋ ಸೆಕ್ಷನ್ 8, 12, ಅಟ್ರಾಸಿಟಿ ಸೆಕ್ಷನ್ 3, ಐಪಿಸಿ ಸೆಕ್ಷನ್ 504, 506ರ ಅಡಿಯಲ್ಲಿ ಮೃತ ಬಾಲಕಿಯ ಪೋಷಕರಿಂದ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.