ಬೆಂಗಳೂರಿಗೆ 25 ಸಾವಿರ ಕೋಟಿ ರೂ.ವಿಶೇಷ ಅನುದಾನ ನೀಡಿ : ಆರ್.ಅಶೋಕ್

Update: 2024-10-18 12:57 GMT

ಬೆಂಗಳೂರು : ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ? ಕಾಂಗ್ರೆಸ್ ಸರಕಾರ 15 ತಿಂಗಳ ಆಡಳಿತದಲ್ಲಿ ಬೆಂಗಳೂರಿಗೆ ಬಿಡಿಗಾಸು ಅನುದಾನ ನೀಡಿಲ್ಲ. ನಗರದ ಜನತೆ ಸರಕಾರದ ವಿರುದ್ಧ ದಂಗೆ ಏಳುವ ಮುನ್ನ, ರಸ್ತೆ ಗುಂಡಿಗಳಿಂದ ಇನ್ನಷ್ಟು ಅಪಘಾತಗಳು, ಸಾವು-ನೋವುಗಳು ಸಂಭವಿಸುವ ಮುನ್ನ ಸಮರೋಪಾದಿಯಲ್ಲಿ ರಸ್ತೆಗಳ ದುರಸ್ತಿ ಮಾಡಬೇಕು. ನಗರಕ್ಕೆ 25ಸಾವಿರ ಕೋಟಿ ರೂ.ವಿಶೇಷ ಅನುದಾನ ನೀಡಿ, ರಸ್ತೆಗಳು, ರಾಜಕಾಲುವೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬಯಲಾಯ್ತು ಬ್ರ್ಯಾಂಡ್ ಬೆಂಗಳೂರಿನ ಮುಖವಾಡ, ಬೀದಿಗೆ ಬಂತು ಸರಕಾರದ ಬಂಡವಾಳ ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮ ಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಸರಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ. ಶೇ.40ರಷ್ಟು ಕಮಿಷನ್ ಸರಕಾರ ಎಂದು ಸುಳ್ಳು, ಅಪಪ್ರಚಾರದ ಮೂಲಕ ಕನ್ನಡಿಗರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ತನ್ನ ಭ್ರಷ್ಟಾಚಾರದ ಹಸಿವು, ದಾಹ ನೀಗಿಸಿಕೊಳ್ಳಲು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನ ಬಲಿ ಕೊಡುತ್ತಿದೆ’ ಎಂದು ದೂರಿದ್ದಾರೆ.

‘ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜಧಾನಿಯ ರಸ್ತೆಗಳು ಕೆರೆಗಳಾಗಿವೆ, ಬಡಾವಣೆಗಳು ಜಲಾವೃತವಾಗಿವೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಬೆಂಗಳೂರಿನ ಮರ್ಯಾದೆ ಹರಾಜು ಹಾಕಿದ್ದೀರಲ್ಲ, ಇದೇನಾ ತಾವುಗಳು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡುವ ಪರಿ?. ಒಂದೇ ಒಂದು ರಸ್ತೆಗುಂಡಿ ಮುಚ್ಚಲು ಕೈಲಾಗದಷ್ಟು ಅಸಮರ್ಥ ಆಯೋಗ್ಯ ಸರಕಾರದಿಂದ ಬ್ರ್ಯಾಂಡ್ ಬೆಂಗಳೂರು ಹೋಗಿ ‘ಗುಂಡಿ ಬೆಂಗಳೂರು’ ಆಗಿ ಪರಿವರ್ತನೆಗೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಡದೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಸರಕಾರ ಗುಂಡಿ ಮಚ್ಚಲು ಹೆಣಗಾಡುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಸ್ಕೈ ಡೆಕ್ ನಿರ್ಮಿಸುತ್ತೇನೆ, ಟನಲ್ ರಸ್ತೆ ನಿರ್ಮಿಸುತ್ತೇನೆ ಎಂದು ಅಂಗೈಯಲ್ಲೇ ಅರಮನೆ ತೋರಿಸುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಲ್ಲೊಂದು ಇಲ್ಲೊಂದು ಗುಂಡಿ ಮುಚ್ಚಿ ಬಿಟ್ಟಿ ಪ್ರಚಾರಕ್ಕೆ ಪೋಸ್ ಕೊಡುವುದು ಬಿಟ್ಟರೆ 15 ತಿಂಗಳಿಂದ ಸಾಧಿಸಿದ್ದು ದೊಡ್ಡ ಶೂನ್ಯ. ರಾಜಧಾನಿಯ ಯಾವುದೇ ರಸ್ತೆಗಳಿಗೂ ಹೋದರೂ ಗುಂಡಿಗಳು ಕಾಣುತ್ತಿವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಾದ ದುಸ್ಥಿತಿಯನ್ನ ಸರಕಾರ ತಂದಿಟ್ಟಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ ಛೀ ಥೂ ಎಂದು ಸರಕಾರಕ್ಕೆ ಉಗಿಯುತ್ತಿದ್ದರೂ ದಪ್ಪ ಚರ್ಮದ ಸರಕಾರ ಮಾತ್ರ ತನ್ನ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿರುವುದು ರಾಜ್ಯದ ದುರಂತ. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಭ್ರಷ್ಟ ಕಾಂಗ್ರೆಸ್ ಸರಕಾರ ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿದೆ?. ಗಾರ್ಡನ್ ಸಿಟಿ, ಗ್ರೀನ್, ಸಿಟಿ, ಐಟಿ ಸಿಟಿ, ಸ್ಟಾರ್ಟಪ್ ಸಿಟಿ, ಸಿಲಿಕಾನ್ ಸಿಟಿ ಎಂದು ಖ್ಯಾತಿ ಹೊಂದಿದ್ದ ಬೆಂಗಳೂರು, ಸರಕಾರದ ವಕ್ರದೃಷ್ಟಿಯಿಂದ ರಸ್ತೆ ಗುಂಡಿಗಳ ನಗರ, ವಾಟರ್ ಫಾಲ್ಸ್ ನಗರ ಎಂದು ನಗೆಪಾಟಲಿಗೆ ಈಡಾಗಿದೆ. ಬೆಂಗಳೂರಿಗೆ ಈ ಕುಖ್ಯಾತಿ ತಂದುಕೊಡಲು ಡಿ.ಕೆ. ಶಿವಕುಮಾರ್ ಅವರು ವರ್ಷದಿಂದ ಅವಿರತವಾಗಿ ಶ್ರಮಿಸಿದ್ದಾರೆ’ ಎಂದು ಅವರು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News