ಕೊಡಗು | ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಭಾವಚಿತ್ರ ಪ್ರಕಟ: ಪತ್ರಿಕಾ ವರದಿಗಾರ, ಸಂಪಾದಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

Update: 2023-09-02 09:33 GMT

ಸಾಂದರ್ಭಿಕ ಚಿತ್ರ

ಸಿದ್ದಾಪುರ (ಕೊಡಗು), ಸೆ.2: ಅಪ್ರಾಪ್ತೆಯ ಭಾವಚಿತ್ರವನ್ನು ಕಾನೂನು ಬಾಹಿರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿ ವರದಿ ಮಾಡಿದ ಕೊಡಗಿನ ಪತ್ರಿಕೆಯೊಂದರ ವರದಿಗಾರ ಮತ್ತು ಸಂಪಾದಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2019 ರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಿತ್ತು.

ಈ  ಪ್ರಕರಣಕ್ಕೆ ಸಂಬಂಧಿಸಿ ʼಸಂತ್ರಸ್ತೆಯು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಸಿದ್ದಾಪುರದಲ್ಲಿ ಪತ್ರಿಕಾ ವರದಿಗಾರನಾಗಿರುವ ವಸಂತ್ ಕುಮಾರ್ ʼಕಾವೇರಿ ಟೈಮ್ಸ್ʼ ಎಂಬ ದಿನ ಪತ್ರಿಕೆಯಲ್ಲಿ ತಂಗಿಯ ಭಾವ ಚಿತ್ರಸಹಿತ ಕಾನೂನು ಬಾಹಿರವಾಗಿ ಪ್ರಕಟಿಸಿ, ಮಾನಸಿಕವಾಗಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ಸಹೋದರ 26.7.2019 ರಂದು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ತನಿಖಾಧಿಕಾರಿ ಪಿ.ಎಸ್.ಐ ಬಿ.ಎಸ್ ಶ್ರೀಧರ್ ಪ್ರಕರಣವನ್ನು ದಾಖಲಿಸಿ ಆರೋಪಿಗಳಾದ ಕಾವೇರಿ ಟೈಮ್ಸ್ ಪತ್ರಿಕೆಯ ವರದಿಗಾರ ವಸಂತ ಕುಮಾರ್ ಮತ್ತು ಪತ್ರಿಕೆಯ ಸಂಪಾದಕ ನಂಜಪ್ಪ ವಿರುದ್ಧ ತನಿಖೆಯನ್ನು ಕೈಗೊಂಡು ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ  ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಆಗಸ್ಟ್‌ 28 (2023) ರಂದು ಈ  ಪ್ರಕರಣದ ವಿಚಾರಣೆ ನಡೆಸಿದ  ನ್ಯಾಯಾಲಯವು ಆರೋಪಿಗಳು ದೋಷಿ ಎಂದು ತೀರ್ಮಾನಿಸಿ ಆರೋಪಿಗಳಿಗೆ ಒಂದು ವರ್ಷದ ಸಜೆ ಮತ್ತು ತಲಾ ರೂ 25,000 ದಂಡ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶರಾದ ಸುಜಾತ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.  ತಪ್ಪಿದಲ್ಲಿ 3 ತಿಂಗಳ ಸಜೆಯನ್ನು ವಿಧಿಸಿದ್ದು, ಆರೋಪಿಗಳಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಕೂಡ ನೀಡಿದೆ.

ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರು ವಾದವನ್ನು ಮಂಡಿಸಿದರು.

ಈ ಹಿಂದೆ ಪತ್ರಿಕೆಯಲ್ಲಿ ಸುಳ್ಳು ವರದಿ ಪ್ರಕಟಿಸಿದ ಪ್ರಕರಣದಲ್ಲೂ ವಸಂತ್ ಕುಮಾರ್ ಗೆ ವಿರಾಜಪೇಟೆಯ ಕಿರಿಯ ಸಿವಿಲ್ ನ್ಯಾಯಾಲಯ ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಲಾಗಿತ್ತು. ಹಾಗೂ ನಕಲಿ ಆರ್.ಎನ್.ಐ ಸಂಖ್ಯೆ ಬಳಸಿ ಪತ್ರಿಕೆ ಮುದ್ರಣ ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News