ಒಂದು ಕೈಯ್ಯಲ್ಲಿ ಕೊಟ್ಟು, ಎರಡು ಕೈಯಲ್ಲಿ ಕಿತ್ತುಕೊಂಡರು: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: 'ಒಂದು ಕೈಯ್ಯಲ್ಲಿ ಐದು ಭಾಗ್ಯಗಳನ್ನು ಕೊಟ್ಟು, ಎರಡು ಕೈಯಲ್ಲಿ ಕಿತ್ತುಕೊಂಡರು' ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿ, 'ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಹಾಲು ಮಾಡೋದಕ್ಕೆ ಹೊರಟಿರುವ ಕಾಂಗ್ರೆಸ್ ಸರಕಾರ, ಜನರ ಮೂಗಿಗೆ ಸವರುವ ಕೆಲಸ ಮಾಡಿದೆ' ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ಹಾಲಿನ ದರ 5 ರೂ.ಯಿಂದ 6ರೂ.ಗೆ ಹೆಚ್ಚಿಸುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಟ್ಟು, ಎರಡು ಕೈಯಲ್ಲಿ ಬಾಚಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ಜನ ಪರಿತಪಿಸಬೇಕಾಗಿದೆ, ಎಲ್ಲ ದರ ಹೆಚ್ಚಾದರೇ ಜನ ಪಾಪ ಹೇಗೆ ಬದುಕಬೇಕು?' ಎಂದು ಪ್ರಶ್ನಿಸಿದರು.
ಸಂಘಪರಿವಾರದ ಸಂಸ್ಥೆಗಳಿಗೆ ಬಿಜೆಪಿ ಸರಕಾರ ನೀಡಿದ್ದ ಜಮೀನು ತಡೆ ಹಿಡಿದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಜಮೀನು ಕೊಟ್ಟಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಕಲ್ಪಿಸಲು ಜಮೀನು ನೀಡಲಾಗಿತ್ತು. ಈಗ ಸರಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.