ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಗ್ಲೋಬಲ್ ಮಾದರಿ ಶಾಲೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.21:ರಾಜ್ಯ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಗ್ಲೋಬಲ್ ಮಾದರಿ ಶಾಲೆ ಆರಂಭಿಸುವ ಚಿಂತನೆ ಸರಕಾರಕ್ಕೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ನಮ್ಮ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಯಾವುದೇ ಹುದ್ದೆ ಭರ್ತಿಯಾಗಿಲ್ಲ. ಈ ಬಗ್ಗೆ ನಮ್ಮ ಮೇಲೆ ಒತ್ತಡವಿದೆ. ಈ ವಿಚಾರವಾಗಿ ಡಿಸಿಎಂ ಅವರು ಸಿಎಂ ಹಾಗೂ ಶಿಕ್ಷಣ ಸಚಿವರ ಜತೆ ಮಾತನಾಡಿ ತೀರ್ಮಾನ ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ನಾವು ನಮ್ಮ ಪ್ರಣಾಳಿಕೆಯಲ್ಲಿ ನವೋದಯ ಮಾದರಿ, ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪ್ರತಿ ಪಂಚಾಯಿತಿಯಲ್ಲಿ ಉತ್ತಮ ಗುಣಮಟ್ಟದ ಶಾಲೆ ಆರಂಭಿಸುವ ಉದ್ದೇಶವಿದೆ. ನೀವು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ವಿಚಾರ ಪ್ರಸ್ತಾಪಿಸಿದ್ದು, ನಮ್ಮ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ತಯಾರು ಮಾಡಬೇಕು. ಇದಕ್ಕಾಗಿ ಹೊಸರೂಪ ನೀಡಲು ಚಿಂತನೆ ಇದೆ ಎಂದರು.
ಇನ್ನೂ, ಪ್ರತಿಯೊಬ್ಬ ಸಂಸ್ಥೆಗಳು ಶಾಲೆಗಳ ನಿರ್ವಹಣೆ ಮಾಡಲು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಶಿಕ್ಷಕರ ನೇಮಕಾತಿ ಜೊತೆಗೆ ಬೆಂಗಳೂರಿನ ದೊಡ್ಡ ಸಂಸ್ಥೆಗಳು ಗ್ರಾಮೀಣ ಭಾಗದ ಶಾಲೆಗಳ ಜವಾಬ್ದಾರಿ ಪಡೆದು ಶಿಕ್ಷಕರು ಹಾಗೂ ಮಾನವ ಸಂಪನ್ಮೂಲ ನೀಡಬೇಕು ಈ ಬಗ್ಗೆ ಸಿಎಸ್‍ಆರ್ ರೂಪದಲ್ಲಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದೂ ಅವರು ಹೇಳಿದರು.