ದಿಲ್ಲಿಗೆ ತೆರಳಿ ಬಿಜೆಪಿ ವರಿಷ್ಠರಿಗೆ ದೂರು ನೀಡಲು ಮುಂದಾದ ವಿ.ಸೋಮಣ್ಣ
ತುಮಕೂರು: ಇತ್ತೀಚಿಗೆ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಯ ಬಗ್ಗೆ ಅಸಮಾಧಾನ ಹೊಂದಿರುವ ವಿ. ಸೋಮಣ್ಣ ಡಿ.07 ರಂದು ದಿಲ್ಲಿ ಹೈಕಮಾಂಡ್ ವರಿಷ್ಠರನ್ನು ಭೆಟಿಯಾಗಿ ದೂರು ಕೊಡಲು ಮುಂದಾಗಿದ್ದಾರೆ.
ಈ ಸಂಬಂಧ ಶನಿವಾರ ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನ್ನ ಜೊತೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಗೊಕಾಕ್ ಶಾಸಕ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅರವಿಂದ್ ಬೆಲ್ಲದ್ ಅವರನ್ನು ಡಿ.7ರಂದು ದಿಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ವರಿಷ್ಠರನ್ನು ಭೇಟಿಮಾಡಿ ತಿಳಿಸುತ್ತೇನೆ. ಹೈಕಮಾಂಡ್ ವರಿಷ್ಠರು ಮುಂದಿನ ನಿರ್ಧಾರ ನೋಡಿಕೊಳುತ್ತಾರೆ’ ಎಂದು ಹೇಳಿದರು.
‘ಕಳೆದ ರಾತ್ರಿ ಹೈಕಮಾಂಡ್ ವರಿಷ್ಠರಿಂದ ಒಂದು ಸಂದೇಶ ಬಂದಿದೆ.ಹಾಗಾಗಿ ಡಿ. 7ರಿಂದ 10ರ ವರೆಗೆ ನಾಲ್ಕು ದಿನ ದಿಲ್ಲಿಗೆ ಹೋಗಿ, ನಾಯಕರನ್ನು ಭೇಟಿಯಾಗುತ್ತೇವೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವುದು. ಇಲ್ಲದ್ದಿರೆ ತಾಯಿ ಸಹ ಹಾಲು ಕೊಡುವುದಿಲ್ಲ. ನಾವು ಹಿರಿಯರು. ನಮಗೆ ನಮ್ಮದೇ ಆದ ಸೇವಾ ಅನುಭವ, ಆಲೋಚನೆಗಳು ಇವೆ. ಎಲ್ಲವೂ ನಮ್ಮದೇ ಸರಿ ಎಂದೂ ಹೇಳುವುದಿಲ್ಲ. ಏನೆಲ್ಲ ಆಗಿದೆ ಎಂಬ ವಿಚಾರಗಳನ್ನು ಹೈಕಮಾಂಡ್ ವರಿಷ್ಠ ಮುಂದೆ ಹೇಳುತ್ತೇವೆ. ವರಿಷ್ಠರ ನಿರ್ಧಾರದ ಮೇಲೆ ನನ್ನ ನಡೆ ನಿಂತಿದೆ’ ಎಂದು ಹೇಳಿದರು.