ಗಾಂಧಿಯನ್ನು ಕೊಂದ ಗೋಡ್ಸೆ, ಆರೆಸ್ಸೆಸ್- ಬಿಜೆಪಿಯ ಆರಾಧ್ಯ ದೈವ : ಸಿಎಂ ಸಿದ್ದರಾಮಯ್ಯ

Update: 2024-01-30 12:32 GMT

Photo: X/@siddaramaiah

ಬೆಂಗಳೂರು: “ಗಾಂಧಿಜಿಯನ್ನು ಕೊಂದ ಗೋಡ್ಸೆ ಆರೆಸ್ಸೆಸ್-ಬಿಜೆಪಿಯ ಆರಾಧ್ಯ ದೈವ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಮಹಾತ್ಮ ಗಾಂಧೀಜಿ ಒಬ್ಬರು ಶ್ರೇಷ್ಠ ಹಿಂದೂ. ಅಂತಹ ರಾಮ ಭಕ್ತನನ್ನು ಗುಂಡಿಕ್ಕಿ ಕೊಂದವರೇ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಗಾಂಧೀಜಿಯವರನ್ನು ಮಾತ್ರ ಮಹಾತ್ಮ ಮತ್ತು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸಿದರು” ಎಂದು ಹೇಳಿದರು.

“ಗಾಂಧಿಜೀಯವರು ನುಡಿದಂತೆ ನಡೆಯುತ್ತಿದ್ದರು. ದೇಶ ವಿಭಜನೆಯಾದಾಗ ಸ್ವಾತಂತ್ರ್ಯವನ್ನು ಸಂಭ್ರಮಿಸದೇ ಹಿಂದೂ ಮುಸಲ್ಮಾನರ ನಡುವೆ ಸೌಹಾರ್ದತೆಯನ್ನು ಸ್ಥಾಪಿಸಲು ಗಾಂಧೀಜಿಯವರು ಶ್ರಮಿಸಿದರು. ಭಾರತದ ಹಿಂದೂಗಳು ಪಾಕಿಸ್ತಾನಕ್ಕೆ ಹೋಗದೇ ಇಲ್ಲಿಯೇ ಉಳಿಯಬೇಕೆಂದು ಗಾಂಧೀಜಿ ಪ್ರಯತ್ನಿಸಿದರು”ಎಂದು ತಿಳಿಸಿದ್ದಾರೆ.

 ಮನುಷ್ಯರ ನಡುವೆ ವೈಷಮ್ಯ ಬೆಳೆಸುವುದನ್ನು ಯಾವ ಧರ್ಮವೂ ಬೋಧಿಸುವುದಿಲ್ಲ

“ದೇಶ ರಾಮ ರಾಜ್ಯವಾಗಬೇಕೆಂಬ ಚಿಂತನೆಯುಳ್ಳ ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವವರು ‘ತಾವು ಮಾತ್ರ ಹಿಂದೂಗಳು’ ಎಂದು ಪ್ರತಿಪಾದಿಸುತ್ತಿದ್ದಾರೆ. ಮನುಷ್ಯರ ನಡುವೆ ವೈಷಮ್ಯ ಬೆಳೆಸುವುದನ್ನು ಯಾವ ಧರ್ಮವೂ ಬೋಧಿಸುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

“ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಒಳಿತನ್ನು ಬಯಸುವ ಹಾಗೂ ಸರ್ವ ಧರ್ಮಗಳನ್ನು ಗೌರವಿಸುವ ಪಕ್ಷ. ಮಹಾತ್ಮ ಗಾಂಧೀಜಿಯವರು ತೋರಿದ ಹಾದಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ವಾದರ್ಶಗಳೇ ದಾರಿದೀಪ. ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು, ಮಾನವರಾಗಿ ಸಾಮರಸ್ಯದಿಂದ ಬಾಳುವುದೇ ನಮ್ಮ ಮುಂದಿರುವ ಸವಾಲು” ಎಂದು ತಿಳಿಸಿದರು.

“ಬಿಜೆಪಿಯವರು ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ರಾಮಭಕ್ತರಾಗಿದ್ದ ಗಾಂಧೀಜಿಯವರ ಹತ್ಯೆಗೈದ ಗೋಡ್ಸೆಯನ್ನು ಪಾಲಿಸುವವರನ್ನು ಜನರು ನಂಬುವುದಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ರಾಮನ ಆದರ್ಶವನ್ನು ನಿಜ ಅರ್ಥದಲ್ಲಿ ಪಾಲಿಸುವ ನಾನು ಜನವರಿ 22ರಂದು ಬೆಂಗಳೂರು ಸಮೀಪ ನೂತನ ಶ್ರೀರಾಮ ಮಂದಿರವನ್ನು ಉದ್ಘಾಟಿಸಿದೆ. ‘ಜೈ ಶ್ರೀರಾಮ್’ ಎಂಬುದು ಬಿಜೆಪಿಯವರ ಸ್ವತ್ತಲ್ಲ. ಮಹಾತ್ಮಾ ಗಾಂಧೀಜಿಯವರೇ ‘ಹೇ ರಾಮ್’ ಎಂದು ಹೇಳಿದ್ದರು”ಎಂದರು.

ದೇಶಭಕ್ತಿಯ ಬಗ್ಗೆ ಬಿಜೆಪಿ ನಮಗೆ ಹೇಳಿಕೊಡುವ ಅಗತ್ಯವಿಲ್ಲ

“ಬಿಜೆಪಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ಕೇವಲ ಬಾಯಿಮಾತಾಗಿದ್ದು, ಜಾತ್ಯಾತೀತತೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ. ಆದರೆ ಈ ಮಾತಿಗೆ ವಿರುದ್ಧವಾಗಿ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ವಾಸ್ತವವಾಗಿ ದೇಶದ ಐಕ್ಯತೆಯೆಂದರೆ 143 ಕೋಟಿ ಜನ ಅನ್ಯೋನ್ಯವಾಗಿ, ಸೌಹಾರ್ದಯುತವಾಗಿ ಬಾಳಬೇಕು. ಯಾರನ್ನೂ ದ್ವೇಷಿಸಬಾರದು. ದೇಶಭಕ್ತಿಯ ಬಗ್ಗೆ ಬಿಜೆಪಿ ನಮಗೆ ಹೇಳಿಕೊಡುವ ಅಗತ್ಯವಿಲ್ಲ”, ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ದೇಶದ ಇತಿಹಾಸವೇ ತಿಳಿದಿಲ್ಲ. ಅದಕ್ಕೆ ಅಂಬೇಡ್ಕರ್ ಅವರು ಯಾರಿಗೆ ಇತಿಹಾಸ ತಿಳಿದಿಲ್ಲವೋ ಅವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದಿದ್ದರು. ದೇಶದ ಆಡಳಿತದಿಂದ ಬಿಜೆಪಿಯನ್ನು ದೂರವಿಡುವುದೇ ಗಾಂಧೀಜಿಯವರಿಗೆ ಸಲ್ಲಿಸುವ ಗೌರವ. ಅವರು ಅಧಿಕಾರದಲ್ಲಿರಬಾರದು. ದೇಶದಲ್ಲಿ ಐಕ್ಯತೆ , ಶಾಂತಿಯಿಂದ ಇರಲು, ಎಲ್ಲರೂ ಮನುಷ್ಯರಾಗಿ ಬಾಳಬೇಕಾದರೆ ಜಾತ್ಯಾತೀತತೆಯಲ್ಲಿ ನಂಬಿಕೆ ಇರಬೇಕು. ನಾವೆಲ್ಲರೂ ಗಾಂಧಿಯವರನ್ನು ಸ್ಮರಿಸಿ, ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News