ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರಕಾರ : ಕುಮಾರಸ್ವಾಮಿ ಟೀಕೆ

Update: 2024-02-03 10:06 GMT

ಬೆಂಗಳೂರು : ʼಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರಕಾರ, ಈಗ ಎಸೆಸ್ಸೆಲ್ಸಿ ಮಕ್ಕಳ ಕಿಸೆಗೂ ಕೈ ಹಾಕಿದೆʼ ಎಂದು ಮಾಜಿ ಸಿಎಂ ಕುಮಾರಾಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ʼಎಕ್ಸ್‌ʼ ನಲ್ಲಿ ಸರಣಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಅವರು, “ಜನತೆಗೆ 5 ಗ್ಯಾರಂಟಿ ಕೊಟ್ಟೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅದೆಷ್ಟು ಅಧಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲಿದೆ. ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರಕಾರ, ಈಗ ಎಸೆಸ್ಸೆಲ್ಸಿ ಮಕ್ಕಳ ಕಿಸೆಗೂ ಕೈ ಹಾಕಿದೆ” ಎಂದು ಹೇಳಿದ್ದಾರೆ.

“ಅಕ್ರಮ ಸುಲಿಗೆಯಲ್ಲಿ 'ಸಿದ್ದಹಸ್ತ' ವಾಗಿರುವ ಸರಕಾರ, ಈಗ ಕಾನೂನು ಬದ್ಧವಾಗಿಯೇ ಲಜ್ಜೆಗೆಟ್ಟು ಸುಲಿಗೆ ಮಾಡುತ್ತಿದೆ. ಇದೇ ಫೆ.26ರಿಂದ ಮಾರ್ಚ್ 3ರವರೆಗೂ ನಡೆಯಲಿರುವ 2023-24ನೇ ಸಾಲಿನ ಎಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಆಗುವ ವೆಚ್ಚವನ್ನು ನಾಚಿಕೆಗೆಟ್ಟ ಸರಕಾರ ಮಕ್ಕಳಿಂದಲೇ ವಸೂಲಿ ಮಾಡಲು ಹೊರಟಿದೆ”ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಸಾಗಣೆ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆಯೇ ಹೇರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ವೆಚ್ಚ ವಸೂಲಿ ಮಾಡುವಂತೆ ಎಲ್ಲಾ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದು ಸರಕಾರ ಎಷ್ಟರ ಮಟ್ಟಿಗೆ ದಿವಾಳಿಯಾಗಿ ಹೋಗಿದೆ ಎನ್ನುವುದಕ್ಕೆ ಉದಾಹರಣೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ವೆಚ್ಚ ವಸೂಲಿ ಮಾಡಿ, ಆ ಮೊತ್ತವನ್ನು ಇಲಾಖೆ ಉಪ ನಿರ್ದೇಶಕರು (ಆಡಳಿತ), ಇವರ ಖಾತೆಗೆ ಜಮೆ ಮಾಡಬೇಕು ಎಂದು ಅವರು ಫರ್ಮಾನು ಹೊರಡಿಸಿದ್ದಾರೆ”, ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

“ಗ್ಯಾರಂಟಿ ಕೊಟ್ಟು ಬಡವರ ಉದ್ಧಾರ ಮಾಡುತ್ತಿದ್ದೇವೆ ಎಂದು ಬೀಗುವ ಸರಕಾರಕ್ಕೆ, ಅದೇ ಬಡಮಕ್ಕಳಿಗೆ 50 ರೂ. ಖರ್ಚು ಮಾಡಲು ಗತಿ ಇಲ್ಲವೇ? ಈಗಾಗಲೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರಕಾರ ಬರೆಯ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು”, ಎಂದು ಕುಮಾರಸ್ವಾಮಿಯವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News