ಮಳೆಯಿಂದ ಅಪಾರ ಹಾನಿ; ರಾಜ್ಯ ಸರಕಾರ 5,000 ಕೋಟಿ ರೂ. ಬಿಡುಗಡೆ ಮಾಡಲಿ: ಆರ್. ಅಶೋಕ್

Update: 2024-10-21 17:27 GMT

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಗಿದ್ದು, ರಾಜ್ಯ ಸರಕಾರ ಸಭೆ ಕರೆದು 5ಸಾವಿರ ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಲಿ. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1ಸಾವಿರ ಕೋಟಿ ರೂ.ಬಿಡುಗಡೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಸೋಮವಾರ ಬೆಂಗಳೂರಿನ ಸಿಲ್ಕ್ ಬೋರ್ಡ್ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಕುಂಭಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ಅನಾಹುತವಾಗಿದೆ ಎಂದು ಪರಿಶೀಲಿಸಬೇಕು ಎಂದರು.

ಒಂದು ತಿಂಗಳಿಂದ ಪ್ರವಾಹ ಸಂಬಂಧದ ಸಭೆಯೇ ನಡೆದಿಲ್ಲ. ಸರಕಾರ ಕೂಡಲೇ ಸಭೆ ಕರೆದು ಕನಿಷ್ಠ 5ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ವಿಶೇಷವಾಗಿ 1ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿ. 16 ತಿಂಗಳ ಕಾಂಗ್ರೆಸ್ ಸರಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ ಎಂದು ದೂರಿದರು.

ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ.ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರ ಜೊತೆಗೆ ಕಸದ ಸಮಸ್ಯೆಯೂ ಸೃಷ್ಟಿಯಾಗಿದೆ. ಮಾನ್ಯತಾ ಟೆಕ್‍ಪಾರ್ಕ್ ಈಗ ಮುಳುಗಡೆ ಪಾರ್ಕ್ ಆಗಿಬಿಟ್ಟಿದೆ. ಸಿಲ್ಕ್‍ಬೋರ್ಡ್‍ನಲ್ಲಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದರು. ಆದರೆ, 6 ತಿಂಗಳಾದರೂ ಏನೂ ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾತ್ರಿ ಪರಿಶೀಲನೆ ಮಾಡಿದ್ದು, ಅವರಿಗೆ ಯಾವುದೇ ಸಮಸ್ಯೆ ಕಂಡಿಲ್ಲ ಎಂದು ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News