‘ನೈಸ್’ ಯೋಜನೆಯನ್ನು ಸರಕಾರ ವಶಕ್ಕೆ ಪಡೆಯಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹ
ಬೆಂಗಳೂರು: ಬಡವರ ಭೂಮಿಯನ್ನು ದುರುಪಯೋಗ ಪಡೆಸಿಕೊಂಡಿರುವ ‘ನೈಸ್ ಯೋಜನೆ’ಯನ್ನು ರಾಜ್ಯ ಸರಕಾರ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈಸ್ ಕಂಪೆನಿ ವಶದಲ್ಲಿರುವ 13,404 ಎಕರೆಯಷ್ಟು ರೈತರ ಭೂಮಿ ಸರಕಾರ ವಶಪಡಿಸಿಕೊಳ್ಳಬೇಕು. ಈ ಬಗ್ಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 2023ರ ಅ.19ರಂದು ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ. ಅವರು ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಹೋದರೆ ಅವರ ರಾಜಕೀಯ ಜೀವನಕ್ಕೆ ಇದೇ ಕಪ್ಪುಚುಕ್ಕೆಯಾಗಿ ಉಳಿದು ಹೋಗುತ್ತದೆ ಎಂದು ಎಚ್ಚರಿಸಿದರು.
ನೈಸ್ ರಸ್ತೆ ಯೋಜನೆ ವಿರುದ್ಧ ನಮ್ಮ ಪಕ್ಷ ದನಿ ಎತ್ತಿದೆ. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿಯು ಈ ಯೋಜನೆಯನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿ ವರದಿ ಕೊಟ್ಟಿದೆ. ಆದರೆ ಸರಕಾರ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದು ದೇವೇಗೌಡ ಟೀಕಿಸಿದರು.
ನಾನು ನನ್ನ ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು ಅಂದರೆ ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು, ಒಳ್ಳೆಯ ರಸ್ತೆ ನಿರ್ಮಾಣ ಆಗುತ್ತದೆ ಎಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಗೆ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಇದನ್ನು ಸರಿ ಮಾಡಲಿ ಎಂದು ದೇವೇಗೌಡ ಹೇಳಿದರು.
ಡಿಸಿಎಂ ವಿರುದ್ಧ ಕಿಡಿ: ಈ ಸರಕಾರ ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ಹಣ ಎಲ್ಲಿಗೆ ತೆಗೆದುಕೊಂಡು ಹೋಗಿದೆ ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಇದು ಕರ್ನಾಟಕದ ಜನರ ಸಂಪತ್ತು. ಡಿಸಿಎಂ ಅವರ ಉದ್ದಟತ, ಅವರು ಎಲೆಲ್ಲಿ ಹೋಗಿದ್ದಾರೆ. ಎಷ್ಟು ಹಣ ಸಾಗಿಸಿದ್ದಾರೆ. ಎಷ್ಟು ಹಣವನ್ನು ಚುನಾವಣೆ ಆಯೋಗ ಜಪ್ತಿ ಮಾಡಿದೆ ಎಂಬುದೆಲ್ಲ ಜನರಿಗೆ ಗೊತ್ತಿದೆ ಎಂದು ಅವರು ಹೇಳಿದರು.
ಸೇಡಿನ ರಾಜಕೀಯ ಬೇಡ: ತೆಲಂಗಾಣದಲ್ಲಿ ಮುಸ್ಲಿಮರಿಗೆ ಬಜೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಜತೆ ಮಂತ್ರಿ ಆಗಿದ್ದೋರು ನಿತ್ಯ ಏನೇನೋ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿಕಾರಿದ ಅವರು, ನಾವು ರಾಮನನ್ನು ಪೂಜೆ ಮಾಡುತ್ತೇವೆ. ಅದು ನಮ್ಮ ಭಕ್ತಿ. ಆದರೆ ಬೇರೆ ಸಮುದಾಯಕ್ಕೆ ಅಪಾಯ ಆದರೆ ನಾವು ಅಧಿಕಾರದಲ್ಲಿ ಇದ್ದರೆ ಅವರಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ ಎಂದರು.
ಶ್ರೀಕಾಂತ್ ಪೂಜಾರಿ ಮೇಲೆ ಹಿಂದಿನ ಪ್ರಕರಣ ಪುನಃ ತೆರೆದು ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‍ನವರು ಹೊರಟಿದ್ದಾರೆ. ಎನ್‍ಡಿಎ ಜತೆ ಇರೋ ನಾವು ಈ ಸಮಯದಲ್ಲಿ ನಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇದೆ. 60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ದೇವೇಗೌಡ ಭವಿಷ್ಯ ನುಡಿದರು.
ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಸೋಲಿಸಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‍ನವರು ಅಹಂ ಸೃಷ್ಟಿ ಮಾಡುತ್ತಿದ್ದಾರೆ. 20 ಸ್ಥಾನ ಗೆಲ್ಲೋದು ಎಂದರೆ ಕನಸು ಮಾತ್ರ. ಈ ಬಾರಿ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್‍ಡಿಎ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಪರಿಷತ್ ಸದಸ್ಯ ಟಿ.ಎ.ಶರವಣ, ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.