ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ | ಕೇಂದ್ರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಿ : ಗೋವಿಂದ ಕಾರಜೋಳ

Update: 2024-05-29 12:50 GMT

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು.

ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ತನಿಖಾ ಸಂಸ್ಥೆಗಳಿಂದ ಇದರ ಸಮಗ್ರ ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಆದುದರಿಂದ, ಕೇಂದ್ರ ಸರಕಾರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಮಂತ್ರಿಗಳ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಬರೆದಿದ್ದಾರೆ. ಹಾಗಾದರೆ ಎಫ್‍ಐಆರ್ ನಲ್ಲಿ ಸಚಿವರ ಹೆಸರು ಯಾಕೆ ಬಂದಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸರಕಾರದ ಅಧೀನ ಸಂಸ್ಥೆಯಾದ ಸಿಐಡಿಯವರು ಮುಖ್ಯಮಂತ್ರಿ, ಸಚಿವರ ಬಗ್ಗೆ ತನಿಖೆ ಮಾಡಲು ಎಷ್ಟರಮಟ್ಟಿಗೆ ಸಾಧ್ಯ ಎಂದು ಅವರು ಹೇಳಿದರು.

ನಿಗಮದ ಬ್ಯಾಂಕ್ ಖಾತೆಯು ವ್ಯವಸ್ಥಾಪಕ ನಿರ್ದೇಶಕ ಮತ್ತು ಲೆಕ್ಕ ಅಧಿಕಾರಿಯ ಜಂಟಿ ಖಾತೆಯಾಗಿರುತ್ತದೆ. ಮಾರ್ಚ್‍ನಲ್ಲಿ ಹಣ ವರ್ಗಾವಣೆ ಆಗಿದೆ. ಮಾ.4ರಂದು 25 ಕೋಟಿ, 6ರಂದು 25 ಕೋಟಿ, 21ರಂದು 44 ಕೋಟಿ ರೂ.ವರ್ಗಾವಣೆ ಆಗಿದೆ. ರಾಜ್ಯ ಹುಜೂರ್ ಖಜಾನೆಯಿಂದ 43.33 ಕೋಟಿ ರೂ.ವರ್ಗಾವಣೆ ಆಗಿದೆ. ಬಳಿಕ ಮೇ 21ರಂದು 50 ಕೋಟಿ ರೂ.ವರ್ಗಾವಣೆ ಆಗಿದೆ ಎಂದು ಗೋವಿಂದ ಕಾರಜೋಳ ವಿವರಿಸಿದರು.

ಜಂಟಿ ಖಾತೆ ಇದ್ದಾಗ ಹೇಗೆ ಹಣ ವರ್ಗಾವಣೆ ಆಗಿದೆ?. ಬ್ಯಾಂಕಿನ ಪ್ರತಿ ತಿಂಗಳ ವಿವರ- ಹುಜೂರ್ ಖಜಾನೆಯ ವಿವರವನ್ನು ಪುನರ್ ಪರಿಶೀಲಿಸಲಿಲ್ಲವೇ?. ಎಂದ ಅವರು, ಮಾ.31ರಂದು ಹಣಕಾಸು ವರ್ಷ ಮುಕ್ತಾಯ ಆದ ಬಳಿಕ ವ್ಯವಸ್ಥಾಪಕ ನಿರ್ದೇಶಕ ಮತ್ತು ಇಲಾಖೆಯ ಅಧಿಕಾರಿಗಳು ಅದನ್ನು ಪರಿಶೀಲಿಸಬೇಕಿತ್ತು ಎಂದು ಅವರು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲುದರೋಡೆ. 187 ಕೋಟಿ ರೂ. ಹಗರಣದ ವಿಚಾರ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಸರಕಾರವಿದು. ಹಗರಣದಲ್ಲಿ ಸಂಪೂರ್ಣವಾಗಿ ಭಾಗಿ ಆಗಿದ್ದರಿಂದಲೇ ಕಣ್ಮುಚ್ಚಿ ಕುಳಿತಿದೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News