ಹೊಸ ದಿಕ್ಸೂಚಿ ಇಲ್ಲದೆ ಕವಲು ದಾರಿಯಲ್ಲಿ ಸರಕಾರ: ಬಸವರಾಜ ಬೊಮ್ಮಾಯಿ

Update: 2023-07-03 19:05 GMT

ಬೆಂಗಳೂರು, ಜು.3: ರಾಜ್ಯಪಾಲರ ಭಾಷಣ ಸಪ್ಪೆಯಾಗಿದ್ದು ಯಾವುದೇ ಜೀವಾಳ ಇಲ್ಲ. ಹೊಸ ಸರಕಾರ ಬಂದಾಗ, ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಸರಕಾರ ಕವಲು ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಭರವಸೆ ಮೂಡುವಂತಹ ಯಾವುದೇ ಅಂಶ ಇಲ್ಲ. ಅಕ್ಕಿಯನ್ನು 10 ಕೆಜಿ ಕೊಡುತ್ತೇವೆ ಅಂತ ಸಹಿ ಮಾಡಿ ಹೇಳಿದ್ದರು. ಈಗ ಕೇಂದ್ರ ಅಂತ ಹೇಳದೆ ಆಹಾರ ಭದ್ರತೆಯಲ್ಲಿ ಕೊಡುತ್ತೇವೆ ಅಂತಿದ್ದಾರೆ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಹೇಳಲು ಅವರಿಗೆ ನಾಚಿಕೆಯಾಗಿದೆ ಎಂದರು ವಾಗ್ದಾಳಿ ನಡೆಸಿದರು.

ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿದ್ದರು. ಆದರೆ, ಈಗ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ. ಜನರನ್ನು ಯಾಮಾರಿಸುವ ಕೆಲಸ ಮಾಡಿದ್ದಾರೆ. ಜವಾಬ್ದಾರಿಯಿಂದ ನುಸುಳಿಕೊಳ್ಳುತ್ತಿರುವ ಸರಕಾರ ಇದು. ಅರ್ಥವಿಲ್ಲದೆ ಸುಮ್ಮನೆ ಬೊಗಳೆ ಭಾಷಣ ಮಾಡಿಸಿದ್ದಾರೆ. ಈ ಸರಕಾರಕ್ಕೆ ಅಭಿವೃದ್ಧಿಯ ಚಿಂತನೆಯಿಲ್ಲ ಎಂದು ಅವರು ಆರೋಪಿಸಿದರು.

ನಮ್ಮಲ್ಲಿ ಎಲ್ಲರೂ ಸಮರ್ಥರು: ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ತಿರುಗೇಟು ನೀಡಿದ ಅವರು, ಇಲ್ಲಿ ಶಿಸ್ತಿನ ಪ್ರಶ್ನೆ ಇಲ್ಲ ನಾಳೆಯಿಂದ ಅಧಿವೇಶನ ಅಧಿಕೃತವಾಗಿ ಆರಂಭವಾಗಲಿದೆ. ಅಷ್ಟರೊಳಗೆ ವಿಪಕ್ಷನಾಯಕನ ಆಯ್ಕೆಯಾಗಲಿದೆ. ಪ್ರತಿಪಕ್ಷದ ನಾಯಕನಾಗಲು ನಮ್ಮಲ್ಲಿರುವ 66 ಜನರು ಸಮರ್ಥರಿದ್ದಾರೆ ಎಂದರು.

ಬಿಟ್ ಕಾಯಿನ್ ಪ್ರಕರಣ ಎಸ್‍ಐಟಿಗೆ ವಹಿಸಿರುವುದು ಒಳ್ಳೆದಾಯಿತು. ಸರಕಾರ ಯಾವುದೇ ರೂಪದಲ್ಲಿ ತನಿಖೆ ಮಾಡಿಸಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News