ಸರಕಾರ ಸಿಸಿಬಿ ರಚಿಸಿ ಅಧಿಸೂಚನೆ ಹೊರಡಿಸಿದ ನಂತರ ಪೊಲೀಸ್ ಠಾಣೆಯ ಅಧಿಕಾರ ಹೊಂದಿರಲಿದೆ: ಹೈಕೋರ್ಟ್

Update: 2023-10-31 16:59 GMT

ಬೆಂಗಳೂರು, ಅ.31: ರಾಜ್ಯ ಸರಕಾರವು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ರಚನೆ ಮಾಡಿ ಪೊಲೀಸ್ ಠಾಣೆಯಾಗಿ ಅಧಿಕಾರ ನೀಡಿದ ಬಳಿಕ ಆ ಅಧಿಕಾರಿಗಳು ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ನೀಡಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಕರ್ನಾಟಕ ಪೊಲೀಸ್ ಕಾಯಿದೆಯಡಿ ರಾಜ್ಯ ಸರಕಾರವು ಯಾವುದೇ ಅಧಿಕಾರಿಯನ್ನು ಪೊಲೀಸ್ ಠಾಣೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಕ್ಕೆ ಅವಕಾಶವಿದ್ದು, ಅಂತಹ ಅಧಿಕಾರಿಯು ಠಾಣಾ ಮುಖ್ಯಸ್ಥರಾಗಿ ಅಧಿಕಾರ ನಡೆಸುವುದಕ್ಕೆ ಅವಕಾಶವಿದೆ ಎಂದು ನ್ಯಾಯಪೀಠ ತಿಳಿಸಿದೆ.

ನಗರದ ಉದ್ಯಮಿ ದಿತುಲ್ ಮೆಹ್ತಾ ಸೇರಿ ಇನ್ನಿತರರ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೇ, ಸಿಸಿಬಿ ಅಧಿಕಾರಿಗಳು ಸಲ್ಲಿಸಿದ್ದ ಅಂತಿಮ ವರದಿ ಪೊಲೀಸ್ ವರದಿಗೆ ಸಮನಾಗಿರಲಿದೆ. ಜತೆಗೆ, ಈ ವರದಿಯ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿಆರ್‍ಪಿಸಿ 190ರ ಪ್ರಕಾರ ಕಾಗ್ನಿಜೆನ್ಸ್ ತೆಗೆದುಕೊಳ್ಳಬಹುದಾಗಿದೆ. ಹೀಗಾಗಿ, ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಯು ಸಮರ್ಥನಿಯ ಎಂದು ತಿಳಿಸಿದೆ.

ಪ್ರಕರಣವೇನು?: ಅರ್ಜಿದಾರ ದಿತುಲ್ ಮೆಹ್ತಾ ಮತ್ತು ಪ್ರಕರಣದ ದೂರುದಾರರು(ಅರ್ಜಿದಾರರ ಪತ್ನಿ) 2010ರ ನ.22ರಂದು ವಿವಾಹವಾಗಿದ್ದರು. ದೂರುದಾರರ ಕುಟುಂಬಸ್ಥರು ವಿವಾಹ ಸಂದರ್ಭದಲ್ಲಿ ವಜ್ರದ ಆಭರಣಗಳು, ರೋಲ್ಯಾಕ್ಸ್ ವಾಚ್ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳನ್ನು ನೀಡಿದ್ದರು.

ಈ ನಡುವೆ ದೂರುದಾರರ ಅತ್ತೆ ಹಾಗೂ ಪತಿಯ ಸಹೋದರಿ, ಮತ್ತಷ್ಟು ಚಿನ್ನಾಭರಣಗಳನ್ನು ತರುವಂತೆ ಆಕೆ ಪತಿಯ ಮೂಲಕ ಒತ್ತಾಯಿಸುತ್ತಿದ್ದರು. ಅಲ್ಲದೆ, ಪತಿಯ ಸಹೋದರಿಗೆ ವಿವಾಹದ ಸಂದರ್ಭದಲ್ಲಿ ದೂರುದಾರರ ಒಡವೆಗಳನ್ನು ನೀಡಲಾಗಿತ್ತು.

ಆದರೆ, ಅವುಗಳನ್ನು ಹಿಂದಿರುಗಿಸಿರಲಿಲ್ಲ. ಇದರಿಂದ ಬೆಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ್ದ ದೂರುದಾರರು ಆಯುಕ್ತರ ಸೂಚನೆ ಮೇರೆಗೆ ಬಸವನಗುಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ರಾಜ್ಯ ಸರಕಾರ ಸಿಸಿಬಿ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಠಾಣೆಯ ಅಧಿಕಾರ ನೀಡಿ ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಅಲ್ಲದೆ, ಬೆಂಗಳೂರು ಪೊಲೀಸ್ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡುವುದಕ್ಕೆ ಅಧಿಕಾರವಿಲ್ಲ. ಸಿಸಿಬಿ ಪೊಲೀಸ್ ಠಾಣೆಯಲ್ಲದ ಕಾರಣ ಅವರು ಸಲ್ಲಿಸಿರುವ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸುವುದಕ್ಕೆ ಅಧಿಕಾರವಿಲ್ಲ ಎಂದು ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News