ವಿಧಾನಸಭೆಯಲ್ಲಿ ‘ಗ್ರೇಟರ್ ಬೆಂಗಳೂರು ವಿಧೇಯಕ’ ಮಂಡನೆ | ಎಲ್ಲರ ಸಲಹೆ, ಅಭಿಪ್ರಾಯ ಪಡೆಯಲಾಗುವುದು : ಡಿಕೆಶಿ

Update: 2024-07-23 16:06 GMT

 ಬೆಂಗಳೂರು : ಬೆಂಗಳೂರು ಎಲ್ಲರಿಗೂ ಸೇರಿದ್ದು, ಹೀಗಾಗಿ ಬೆಂಗಳೂರಿನ ಹಿತ ಕಾಪಾಡಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಎಲ್ಲ ನಾಯಕರ ಅಭಿಪ್ರಾಯ, ಸಲಹೆ ಪಡೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ ಮಾಡಿದಾಗ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ ಹಾಗೂ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಿವಕುಮಾರ್, ನಾನು ರಾಜಕೀಯವಾಗಿ ಬೇರೆಡೆ ಪ್ರತಿನಿಧಿಸುತ್ತಿದ್ದೇನೆ. ನನಗೂ ಬೆಂಗಳೂರಿನ ಬಗ್ಗೆ ಕಾಳಜಿ ಇದೆ. ಅಧಿಕಾರಿಗಳ ಸಮಿತಿ ಮಾಡಿದ್ದಾಗ ಅವರು ಲಂಡನ್ ಮಾದರಿ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲು ಆಗುತ್ತಿಲ್ಲ. ಇರುವ ವ್ಯವಸ್ಥೆಯನ್ನೇ ಸ್ವಲ್ಪ ಪ್ರಮಾಣದಲ್ಲಿ ಮಾರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆಯದೇ ತೀರ್ಮಾನ ಮಾಡುವಷ್ಟು ಮೂರ್ಖ ನಾನಲ್ಲ. ಎಲ್ಲ ಶಾಸಕರ ಜತೆ ಮಾತನಾಡಿ, ಈ ವಿಚಾರ ಹೆಚ್ಚು ಚರ್ಚೆಯಾಗಲಿ, ಬೆಂಗಳೂರಿನ ಹಿತಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳೋಣ. ಪ್ರತಿಪಕ್ಷದವರು ಬೇಡ ಎಂದರೆ ನಾವು ಮಾಡಲು ಆಗುವುದಿಲ್ಲ ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಹೇಳಿದ್ದೇನೆ. ಈ ವಿಧೇಯಕವನ್ನು ಸಾರಸಗಟಾಗಿ ಅಂಗೀಕಾರ ಮಾಡಿ ಎಂದು ಹೇಳುತ್ತಿಲ್ಲ. ಚರ್ಚೆಗಾಗಿಯೇ ಮಂಡನೆ ಮಾಡುತ್ತಿದ್ದೇನೆ. ವಿಧೇಯಕದ ಪ್ರತಿ ಸಾಲನ್ನೂ ಪರಾಮರ್ಶೆ ಮಾಡಿ, ಅಭಿಪ್ರಾಯ ಹೇಳಿ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, ಹೊರಗಿನಿಂದ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಇಂದು ಒಂದೂವರೆ ಕೋಟಿಯಷ್ಟಾಗಿದೆ. ಹೊರ ವರ್ತುಲ ರಸ್ತೆಗಳು ಈಗ ನಗರದ ಮಧ್ಯ ಭಾಗವಾಗಿವೆ. ವಾಹನಗಳ ಸಂಖ್ಯೆಯೇ ಒಂದು ಕೋಟಿ ಮೀರಿದೆ. ನೀರಿನ ವ್ಯವಸ್ಥೆ ಮಾಡಬೇಕು, ಕಸದ ಸಮಸ್ಯೆ ಸೇರಿದಂತೆ ಬೆಂಗಳೂರಿನಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಹಿತ ದೃಷ್ಟಿಯಿಂದ ಈ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ. ಇದು ಉತ್ತಮವಾಗಿದೆಯೋ, ಉತ್ತಮವಾಗಿಲ್ಲವೋ ಎಂಬುದನ್ನು ಚರ್ಚೆ ಮಾಡೋಣ. ಚರ್ಚೆ ಮಾಡದೇ ಏನೂ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ರಾಜ್ಯ ರಾಜಧಾನಿಯು ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಎಲ್ಲ ಭಾಗದವರಿಗೂ ಸೇರಿದೆ. ಬೆಂಗಳೂರಿನ ಮಹತ್ವದ ಬಗ್ಗೆ ನನಗೂ ಅರಿವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನೀವು ಇದನ್ನು ಯಾವ ರೀತಿ ಮಾಡಬೇಕು ಎಂದು ಹೇಳುತ್ತೀರೋ ಆ ರೀತಿ ಮಾಡೋಣ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಇದೇ ತಿಂಗಳು 27ರಂದು ಬೆಂಗಳೂರಿನ ಶಾಸಕರ ಸಭೆ ಕರೆದಿದ್ದೀರಲ್ಲಾ, ಅಂದು ಚರ್ಚೆ ಮಾಡೋಣ” ಎಂದು ಹೇಳಿದಾಗ, ಶಿವಕುಮಾರ್ ‘ಅಂದು ಈ ವಿಚಾರವನ್ನೂ ಚರ್ಚಿಸೋಣ’ ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News