ಯಾವೊಬ್ಬ ಫಲಾನುಭವಿಯೂ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಬಾರದು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2023-12-27 14:19 GMT

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಯಾವೊಬ್ಬ ಫಲಾನುಭವಿಗಳೂ ಇದರಿಂದ ವಂಚಿತರಾಗಬಾರದು. ಆದುದರಿಂದ, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬುಧವಾರ ಬೆಳಗಾವಿ ತಾಲೂಕಿನ ಹಲಗಾದಲ್ಲಿ ಆಯೋಜಿಸಲಾಗಿದ್ದ ‘ಗೃಹ ಲಕ್ಷ್ಮಿ ಅದಾಲತ್’ಗೆ ಚಾಲನೆ ನೀಡಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಡಿ.29ರವರೆಗೆ ವಿಶೇಷ ಶಿಬಿರಗಳು ರಾಜ್ಯಾದ್ಯಂತ ನಡೆಯಲಿವೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಸ್ಥಳದಲ್ಲಿಯೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ. ಯೋಜನೆಯ ಫಲಾನುಭವಿಗಳಿಗೆ ಏನಾದರೂ ಸಮಸ್ಯೆಗಳಿದ್ದರೆ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪರಿಹಾರ ಕಂಡುಕೊಳ್ಳುವಂತೆ ಅವರು ಸೂಚಿಸಿದರು.

ಬೆಳಗಾವಿ ಜಿಲ್ಲೆಯಲ್ಲಿಯೆ ಸುಮಾರು 11 ಲಕ್ಷ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿದ್ದಾರೆ. ತಿಂಗಳಿಗೆ 202 ಕೋಟಿ ರೂ.ಗಳನ್ನು ಈ ಜಿಲ್ಲೆಗೆ ನೀಡಲಾಗುತ್ತಿದೆ. ಹಲಗಾ ಗ್ರಾಮವೊಂದರಲ್ಲಿಯೆ 1600 ಫಲಾನುಭವಿಗಳಿದ್ದಾರೆ. ಹಲಗಾ ಗ್ರಾಮದ ಕೆಲ ಫಲಾನುಭವಿಗಳು ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಕೆಲವರಿಗೆ ಬ್ಯಾಂಕ್ ಖಾತೆಯ ಸಮಸ್ಯೆ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ, ಕೆವೈಸಿ ಆಗಿಲ್ಲ, ಹೀಗೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಅವರಿಗೆ ಹಣ ಹೋಗಿಲ್ಲ. ವಿಶೇಷ ಶಿಬಿರದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್, ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದ ಹಲವು ಫಲಾನುಭವಿಗಳನ್ನು ಸ್ವತಃ ಭೇಟಿಯಾಗಿ ಸಮಸ್ಯೆ ಆಲಿಸಿದರು. ಸ್ಥಳದಲ್ಲಿಯೆ ಪರಿಹಾರವನ್ನು ಒದಗಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಉಪ ನಿರ್ದೇಶಕಿ ರೇವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News