ಗ್ಯಾರಂಟಿ ಯೋಜನೆಗಳು ವಿಫಲ; ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆಗೆ ನಾನು ಸಿದ್ಧ ಎಂದ ಕುಮಾರಸ್ವಾಮಿ

Update: 2023-11-13 09:47 GMT

ಬೆಂಗಳೂರು: ''ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ? ಹೊರಡಿಸಿ ಶ್ವೇತಪತ್ರವನ್ನು. ಬನ್ನಿ ಚರ್ಚೆಗೆ, ನಾನು ತಯಾರಿದ್ದೇನೆ. ಅಧಿವೇಶನದಲ್ಲೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ, ಉತ್ತರಿಸಿ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ''ಚನ್ನಪಟ್ಟಣದ ನನ್ನ ಜನರೂ ಮಾಹಿತಿ ನೀಡಿದ್ದಾರೆ, ರಾಜ್ಯದ ಉಳಿದ 223 ಕ್ಷೇತ್ರಗಳ ಜನರು ಕೊಟ್ಟ ವಿವರವೂ ನನ್ನಲ್ಲಿದೆ. ನೀವು ಒಳಗೊಳಗೆ ಮಾಡುತ್ತಿರುವ ಗಿಲೀಟುಗಳ ಮಾಹಿತಿಯೂ ಇದೆ. ಚರ್ಚೆ ಮಾಡೋಣಂತೆ'' ಎಂದು ಹೇಳಿದ್ದಾರೆ.

''ಕೋಟಿ ರೂಪಾಯಿ ಕೊಟ್ಟು ಗ್ಯಾರಂಟಿ ಸ್ಕೀಮುಗಳ ಬಗ್ಗೆ ಸಮೀಕ್ಷೆ ಮಾಡಿಸಿಕೊಂಡರಲ್ಲ, ಚನ್ನಪಟ್ಟಣದ ಜನರು ಏನು ಹೇಳಿದ್ದಾರೆಯೇ ಎಂಬ ಮಾಹಿತಿ ಅದರಲ್ಲಿ ಇದೆಯಾ? ಕೂಸು ಹುಟ್ಟುವ ಮುನ್ನವೇ ಕುಲಾವಿಯೇ? ಗ್ಯಾರಂಟಿ ಜಾರಿಗೆ ಮೊದಲೇ ಸಮೀಕ್ಷೆ ಪ್ಲ್ಯಾನ್‌ ಮಾಡಿಕೊಂಡಿದ್ದರಲ್ಲ, ಯಾಕೆ? ನಿಮ್ಮ ಯೋಗ್ಯತೆಗೆ ಇನ್ನು ʼಯುವನಿಧಿʼ ಬಂದೇ ಇಲ್ಲ. ಅದು ಬರುತ್ತೋ ಇಲ್ಲವೋ ಗೊತ್ತಿಲ್ಲ. ಅದನ್ನು ಚನ್ನಪಟ್ಟಣದ ಜನರನ್ನೇ ಕೇಳಬೇಕೆ?'' ಎಂದು ಪ್ರಶ್ನಿಸಿದ್ದಾರೆ.

''ಇವರ ರಾಜಕೀಯ ಸ್ವಾರ್ಥಕ್ಕೆ ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳನ್ನು ಬಲಿಗೊಟ್ಟು, ʼರಾಮನಗರʼ ಹೆಸರಿಗೇ ಕೊಕ್‌ ಕೊಡಲು ಹೊರಟಿದ್ದಾರೆ. ಆಯ್ಯೋ ದೇವೆರೇ, ಕಾಂಗ್ರೆಸ್ ಸರಕಾರದಲ್ಲಿ ರಾಮನ ಹೆಸರಿಗೂ ಗ್ಯಾರಂಟಿ ಇಲ್ಲ'' ಎಂದು ಕುಮಾರಸ್ವಾಮಿ ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News