ರಾಜ್ಯದ ಕೇರಳ ಗಡಿಯಲ್ಲಿ ಗುಂಡಿನ ಚಕಮಕಿ, ಓರ್ವ ನಕ್ಸಲ್ ಗೆ ಗಾಯ: ಕೊಡಗು ಜಿಲ್ಲೆಯಲ್ಲಿ 'ಹೈ ಅಲರ್ಟ್'

Update: 2023-11-14 07:53 GMT

ಮಡಿಕೇರಿ ನ.14 : ಕೊಡಗು- ಕೇರಳ ಗಡಿಯಲ್ಲಿ ಸೋಮವಾರ ನಕ್ಸಲರು ಹಾಗೂ ಕೇರಳ ನಕ್ಸಲ್ ಕಾರ್ಯಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆ ವೇಳೆ ಓರ್ವ ನಕ್ಸಲ್ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈತ ಚಿಕಿತ್ಸೆಗಾಗಿ ಅಥವಾ ರಕ್ಷಣೆಗಾಗಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಕೊಡಗಿನ 4- 5 ಕಿ.ಮೀ ದೂರದಲ್ಲಷ್ಟೇ ಗುಂಡಿನ ಚಕಮಕಿ ನಡೆದಿದ್ದು, ನಕ್ಸಲರು ಕೇರಳ ಅರಣ್ಯ ಪ್ರದೇಶದಿಂದ ಕೊಡಗನ್ನು ಪ್ರವೇಶಿಸುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಡಿ ಭಾಗದ ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ಹೋಂಸ್ಟೇ ಗಳಿಗೂ ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಅಲ್ಲದೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.

ನಕ್ಸಲ್ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗಡಿಭಾಗವಾದ ಬಿರುನಾಣಿ, ತೆರಾಳು, ಪರಕಟಗೆರೆ ಮತ್ತು ಕುಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಂಬಿಂಗ್ ಕಾರ್ಯಾಚರಣೆ ಕುರಿತು ಚರ್ಚಿಸಿದರು.

ಕಳೆದ ವಾರವಷ್ಟೇ ಕೇರಳ ಗಡಿಯಲ್ಲಿ ಐವರು ನಕ್ಸಲರು ಹಾಗೂ ಕೇರಳ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಇಬ್ಬರನ್ನು ಬಂಧಿಸಲಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News