ನನ್ನ ಪುತ್ರ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ: ಎಚ್.ಡಿ. ರೇವಣ್ಣ
ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು. ಅಲ್ಲದೆ, ಈ ವಿಚಾರ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ, ವಾಗ್ವಾದಕ್ಕೂ ಕಾರಣವಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಿಯಮ 69ರಡಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ವಿಚಾರ ಪ್ರಸ್ತಾಪಿಸಿ, ಪ್ರಕರಣದ ತನಿಖೆಗೆ ಸರಕಾರ ವಿಶೇಷ ತನಿಖಾ ತಂಡ(ಸಿಟ್)ವನ್ನು ರಚಿಸಿದೆ. ಆದರೆ, ಎಸ್‍ಐಟಿ ತನಿಖೆಯಲ್ಲಿ ತಾರಮತ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
‘ಎಫ್‍ಐಆರ್ ದಾಖಲಾಗಿ 40 ದಿನಗಳಾದರೂ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‍ರನ್ನು ವಿಚಾರಣೆಗೆ ಕರೆಯುವುದಿಲ್ಲ. ಆದರೆ, ಎಚ್.ಡಿ. ರೇವಣ್ಣರ ಪುತ್ರ ಮಾಡಿದ ತಪ್ಪಿಗೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು’ ಎಂದು ಅಶೋಕ್ ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರೇವಣ್ಣ, ಪ್ರತಿಪಕ್ಷದ ನಾಯಕರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸ್ಪಷ್ಟನೆ ನೀಡಲು ನನಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಜೆಡಿಎಸ್‍ನ ಸದಸ್ಯ ಎಂ.ಟಿ.ಕೃಷ್ಣಪ್ಪ, ‘ರೇವಣ್ಣ ಪುತ್ರ ತಪ್ಪು ಮಾಡಿದ್ದಾರೆಂದು ಹೇಳುವುದು ಸರಿಯಲ್ಲ. ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆರ್. ಅಶೋಕ್, ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದರು.
ಈ ಹಂತದಲ್ಲಿ ಎದ್ದುನಿಂತ ಕಾಂಗ್ರೆಸ್‍ನ ಸದಸ್ಯ ರಿಝ್ವಾನ್ ಅರ್ಶದ್, ‘ಎಸ್‍ಐಟಿ ತಂಡ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಪ್ರಕರಣಗಳನ್ನು ಹೋಲಿಕೆ ಮಾಡಿ ಮಾತನಾಡುತ್ತಿರುವುದು ಏಕೆ?, ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಮಾನ ಹರಣ ಪ್ರಕರಣ ವಾಲ್ಮೀಕಿ ಹಗರಣಕ್ಕಿಂತಲೂ ಕಡಿಮೆ ಎಂಬ ಧೋರಣೆಯೇ?, ಮಹಿಳೆಯರ ಮಾನಕ್ಕೆ ಬೆಲೆ ಇಲ್ಲವೇ?’ ಎಂದು ಆಕ್ಷೇಪಿಸಿದರು.
ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ: ಮಧ್ಯಪ್ರವೇಶಿಸಿದ ಎಚ್.ಡಿ.ರೇವಣ್ಣ, ‘ನನಗೆ ಕಾಂಗ್ರೆಸ್ ಶಾಸಕರಂತೆ ವಾದ ಮಾಡುವ ಶಕ್ತಿ ಇಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ, ನಾನು ಯಾರ ಪರವಾಗಿಯೂ ವಹಿಸಿಕೊಂಡು ಮಾತನಾಡುತ್ತಿಲ್ಲ. 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, 25ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
‘ನನ್ನ ವಿರುದ್ಧ ಹೆಣ್ಣು ಮಗಳೊಬ್ಬಳನ್ನು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಕರೆಸಿಕೊಂಡು ದೂರು ಬರೆಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ಡಿಜಿ ಆಗಲು ಅನರ್ಹರು. ಮೂರೂ ಬಿಟ್ಟು ನೀತಿ ಗೆಟ್ಟ ಈ ಸರಕಾರಕ್ಕೆ ನಾಚಿಕೆಯಾಗಬೇಕು’ ಎಂದು ಎಚ್.ಡಿ.ರೇವಣ್ಣ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಆಕ್ಷೇಪಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ಪಿ.ಎಂ.ನರೇಂದ್ರಸ್ವಾಮಿ, ಸಂತ್ರಸ್ತರ ದೂರು ತೆಗೆದುಕೊಳ್ಳುವುದು ತಪ್ಪೇ? ಎಂದು ಪ್ರಶ್ನಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸರಕಾರದ ವಿರುದ್ಧ ರೇವಣ್ಣ ಆರೋಪ ಮಾಡಿದ್ದಾರೆ. ಅವರಿಗೆ ಅನ್ಯಾಯವಾಗಿದ್ದರೆ ಪ್ರತ್ಯೇಕವಾಗಿ ನೋಟಿಸ್ ಕೊಡಲಿ, ಚರ್ಚೆಗೆ ಅವಕಾಶ ಮಾಡಿಕೊಡಿ’ ಎಂದು ಸಲಹೆ ನೀಡಿದರು.