"ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನ್ನೇ ಪ್ರಶ್ನಿಸಿದಂತೆ": ಯತ್ನಾಳ್ ವಿರುದ್ಧ ಹರತಾಳು ಹಾಲಪ್ಪ ಆಕ್ರೋಶ

Update: 2024-10-03 13:23 GMT

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಹೈಕಮಾಂಡಿನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನ್ನೇ ಪ್ರಶ್ನಿಸಿದಂತೆ ಎಂದು ಹೇಳಿದರು.

ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯೇಂದ್ರ, ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕಾಗಿ ಅವರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಯತ್ನಾಳ್ ಹೇಳುತ್ತಿದ್ದಾರೆ. ಆದರೆ, ಅವರಲ್ಲೇ ಒಂದಷ್ಟು ಗೊಂದಲಗಳಿವೆ ಎಂದು ಹೇಳಿದರು.

ವಿಜಯೇಂದ್ರರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರ ಸಲಹೆ, ರಾಜ್ಯ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯಪಡೆದು, ಸಮೀಕ್ಷೆ ಮಾಡಿಸಿ ಈ ನೇಮಕ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಭಿನ್ನಾಭಿಪ್ರಾಯ ಇದ್ದರೆ ದಿಲ್ಲಿಗೆ ಹೋಗಿ ಹೈಕಮಾಂಡನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು. ಸಮಸ್ಯೆಗಳನ್ನು ಚರ್ಚಿಸಬೇಕು. ಹೀಗೆ ರಸ್ತೆಯಲ್ಲಿ, ಹೋದಲ್ಲಿ ಬಂದಲ್ಲಿ ಮಾತನಾಡುವುದು ಸರಿಯಲ್ಲ. ಈಶ್ವರಪ್ಪ ನಮ್ಮ ಪಕ್ಷ ಬಿಟ್ಟು ಹೋದವರು. ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿಯಲ್ಲಿ ಇದ್ದುಕೊಂಡು ಈಶ್ವರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಾಗಿ ಯತ್ನಾಳ್ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಈ ಸರಕಾರ, ಸಿದ್ದರಾಮಯ್ಯರಂಥ ದೊಡ್ಡ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಹೈಕಮಾಂಡಿನ ಮಾರ್ಗದರ್ಶನ, ಸಲಹೆ ಪಡೆದು ಪಕ್ಷ ಸಂಘಟಿಸಿದ್ದಾರೆ. ಪಾದಯಾತ್ರೆ ನಡೆಸಿದ್ದಾರೆ ಎಂದು ಹರತಾಳು ಹಾಲಪ್ಪ ಹೇಳಿದರು.

ಯತ್ನಾಳ್ ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಕಟೀಲ್ ಅವರ ಬಗ್ಗೆಯೂ ಮಾತನಾಡಿದ್ದರು. ಈಗಲೂ ಅದೇ ಚಾಳಿ ಮುಂದುವರೆಸಿದ್ದಾರೆ. ಆಗಲೇ ಕರೆದು ಬುದ್ಧಿ ಹೇಳಿದ್ದರೆ ಸರಿ ಆಗುತ್ತಿತ್ತು. ಇದೇ ಪ್ರವೃತ್ತಿ ಮುಂದುವರೆದರೆ ಅವರ ಭಾಷೆಯಲ್ಲೆ ಉತ್ತರ ಕೊಡುತ್ತೇವೆ. ಹೈಕಮಾಂಡ್‍ಗೆ ದೂರು ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಡಾ.ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News