ಪೊಲೀಸರಿಗೆ ಬೆದರಿಕೆ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಶಾಸಕ ಹರೀಶ್ ಪೂಂಜಾ ಅರ್ಜಿ
Update: 2024-07-05 11:54 GMT
ಬೆಂಗಳೂರು : ಪರವಾನಗಿ ಪಡೆಯದೇ ಗಣಿಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿದ್ದ ಪೊಲೀಸರ ಕ್ರಮ ಆಕ್ಷೇಪಿಸಿ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿ, ಬೆದರಿಕೆ ಹಾಕಿದ ಹಾಗೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈಗಾಗಲೇ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರುವುದರಿಂದ ಆರೋಪಗಳನ್ನು ಕೈ ಬಿಡಲು ಕೋರಿ ಅಧೀನ ನ್ಯಾಯಾಲಯದ ಮುಂದೆ ಆರೋಪಿಯಾದ ಶಾಸಕ ಹರೀಶ್ ಪೂಂಜಾ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಎಂಟು ವಾರದಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಮಾನ ಕೈಗೊಳ್ಳಬೇಕು. ಅಲ್ಲಿಯವರೆಗೂ ವಿಚಾರಣೆಗೆ ಹಾಜರಾಗುವಂತೆ ಹರೀಶ್ ಪೂಂಜಾ ಹಾಗೂ ಇತರೆ ಎಲ್ಲಾ ಆರೋಪಿಗಳಿಗೆ ಅಧೀನ ನ್ಯಾಯಾಲಯ ಸೂಚಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.