ಹರೀಶ್ ಪೂಂಜಾ ಪ್ರಕರಣವನ್ನು ಹಕ್ಕು ಭಾದ್ಯತಾ ಸಮಿತಿಗೆ ವಹಿಸಿ ಸ್ಪೀಕರ್ ಆದೇಶ

Update: 2023-12-05 14:13 GMT

ಬೆಳಗಾವಿ: ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಹಕ್ಕುಚ್ಯುತಿ ಮಂಡನೆ ಪ್ರಸ್ತಾವವನ್ನು ವಿಧಾನಮಂಡಲದ ಹಕ್ಕು ಭಾದ್ಯತಾ ಸಮಿತಿಗೆ ವಹಿಸಿ ಆದೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ  ಸೂಚನೆ ನೀಡಿದರು.

ಬೆಳ್ತಂಗಡಿ ಅರಣ್ಯಾಧಿಕಾರಿಗಳಿಂದ ತಮಗೆ ಹಕ್ಕುಚ್ಯುತಿಯಾಗಿದೆ ಎಂದು ಹರೀಶ್ ಪೂಂಜಾ ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾವ ಮಂಡಿಸಲು ಅವಕಾಶ ಕೊಡುವಂತೆ ಮಾಡಿದ ಆಗ್ರಹಕ್ಕೆ ಬಿಜೆಪಿ ಸದಸ್ಯರು ಸಾಥ್ ನೀಡಿ ಸದನದಲ್ಲಿ ಕೋಲಾಹಲ ಎಬ್ಬಿಸಿದರು. ಅಲ್ಲದೆ, ಸದನದ ಬಾವಿಗಿಳಿದು ಧರಣಿ ನಡೆಸಿದರು.

ಬೆಳ್ತಂಗಡಿ ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಅರಣ್ಯಾಧಿಕಾರಿಗಳು ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಶಾಸಕರ ರಕ್ಷಣೆ ನಿಮ್ಮ ಜವಾಬ್ದಾರಿ, ಹಕ್ಕು ಚ್ಯುತಿ ಪಡೆದುಕೊಂಡು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಸ್ಪೀಕರ್ ಅನುಮತಿ ಪಡೆಯದೆ ತನಿಖೆಗೆ ಅನುಮತಿ ನೀಡಿದರು ಎಂಬ ಕಾರಣಕ್ಕೆ ಕ್ಯಾಬಿನೆಟ್‍ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ವಾಪಸ್ ತೆಗೆದುಕೊಳ್ಳುತ್ತೀರಿ. ಬಡವನ ಮನೆಯನ್ನು ರಕ್ಷಣೆ ಮಾಡಲು ಹೋದ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದು ಮಾಡದಿರುವುದು ಯಾವ ನ್ಯಾಯ? ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಪ್ರಶ್ನೆ ಮಾಡಿದರು.

ಬಿಜೆಪಿ ಸದಸ್ಯರ ಆಗ್ರಹಕ್ಕೆ ಮಣಿದ ಸ್ಪೀಕರ್ ಯು.ಟಿ.ಖಾದರ್, ಹಕ್ಕುಚ್ಯುತಿ ಮಂಡನೆ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರು. ಬಳಿಕ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ಹರೀಶ್ ಪೂಂಜಾ, ತಮ್ಮ ಪ್ರಸ್ತಾಪದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ, ನಂತರ ತನಿಖೆ ನಡೆಸಲು ಆಗ್ರಹಿಸಿದರು.

ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅದು ಮೀಸಲು ಅರಣ್ಯವಾಗಿದೆ. ಅಲ್ಲಿ ಅತಿಕ್ರಮಣ ಮಾಡಿ ಕೃಷಿ ಮಾಡಿದ ಹಿನ್ನಲೆಯಲ್ಲಿ ದೂರು ದಾಖಲು ಆಗಿದೆ. ಅತಿಕ್ರಮಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮುಂದಾದಾಗ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.

ನಾನು ಅಧಿಕಾರಿಗಳಿಗೆ ಕರೆ ಮಾಡಿದಾಗ ಅತಿಕ್ರಮಣದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಅಧಿಕಾರಿಗಳಿಂದ ವರದಿ ತರಿಸುವ ತನಕ ಯಥಾಸ್ಥಿತಿ ಇರಲಿ ಎಂದಿದ್ದೆ. ನನ್ನ ಕರೆಯನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೀರಿ. ಇದು ಸರಿಯಾದ ಕ್ರಮ ಅಲ್ಲ ಎಂದು ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ನಿಯಮ ಪ್ರಕಾರ ಹಕ್ಕುಚ್ಯುತಿಗೆ ಸಚಿವರು ಸ್ಪಷ್ಟನೆ ಕೊಡುವ ಅಗತ್ಯ ಇಲ್ಲ ಎಂದರು. ಈ ವೇಳೆ ಈಶ್ವರ್ ಖಂಡ್ರೆ ಸಹಾಯಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ, ಸ್ಪೀಕರ್ ತೀರ್ಪು ಕೊಡುವ ಮೊದಲು ಏನು ನಡೆದಿದೆ ಎಂಬ ವಿಚಾರ ಸದನಕ್ಕೆ ತಿಳಿಯಲಿ. ಸಚಿವರು ಸದನಕ್ಕೆ ಮಾಹಿತಿ ಕೊಡುತ್ತಿದ್ದಾರೆ, ಅವಕಾಶ ನೀಡಿ ಎಂದರು.

ಮನೆ ನಿರ್ಮಾಣ ಆಗುತ್ತಿದ್ದ ಜಾಗ ಮೀಸಲು ಅರಣ್ಯ ಪ್ರದೇಶವಾಗಿದೆ. ಈ ಸಂಬಂಧ ಜಂಟಿ ಸಮೀಕ್ಷೆಯಾಗುವವರೆಗೂ ಅರಣ್ಯ ಪ್ರದೇಶದಲ್ಲಿ ಯಾವುದೇ ನಿರ್ಮಾಣಗಳಾಗಬಾರದು. ಪ್ರಕರಣ ನಡೆದ ದಿನ ಶಾಸಕರು ತಮಗೆ ಕರೆ ಮಾಡಿದರು. ನಾನು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದೆ. ತಾವು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ಸರಿಯಲ್ಲ. ಅರಣ್ಯ ಒತ್ತುವರಿಯನ್ನು ಬೆಂಬಲಿಸುವುದು ಸರಿಯಲ್ಲ. ಈಗಾಗಲೇ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಅರಣ್ಯ ರಕ್ಷಣೆ ಮಾಡಬೇಕಿದೆ. ಅದರ ಹೊರತಾಗಿ ಶಾಸಕರಿಗೆ ಹಕ್ಕುಚ್ಯುತಿಯಾಗಿದೆ ಎಂದು ಪರಿಭಾವಿಸುವುದಾದರೆ ಹಕ್ಕುಚ್ಯುತಿ ಭಾದ್ಯಸ್ತ ಸಮಿತಿಗೆ ಒಪ್ಪಿಸಲು ತಮ್ಮ ತಕರಾರಿಲ್ಲ.

ಈಶ್ವರ್ ಖಂಡ್ರೆ, ಅರಣ್ಯ ಸಚಿವ

ಅರಣ್ಯ ರಕ್ಷಣೆ ಮಾಡುವುದರ ಪರವಾಗಿ ನಾವೂ ಇದ್ದೇವೆ. ಮಾನವ ಕಾಡು ಪ್ರಾಣಿ ಸಂಘರ್ಷ ಸಾಮಾನ್ಯವಾಗಿದೆ. ಅರಣ್ಯ ಒತ್ತುವರಿ ಜಮೀನು ರೈತರಿಗೆ ಕೊಡಬೇಕು ಎಂದು ಸಾಕಷ್ಟು ಹೋರಾಟ ನಡೆದಿದೆ. ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಆಗಿದೆ ಎಂದು ಆರೋಪ ಬಂದಿತ್ತು. ನಾವು ಕೂಡಲೇ ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದೇವೆ. ಅಧಿಕಾರಿಗಳನ್ನು ಕೇಳುವವರು ಹೇಳುವವರು ಯಾರು ಇಲ್ಲ. ಶಾಸಕರ ಮೇಲೆ ಎಫ್.ಐ.ಆರ್ ಹಾಕ್ತಾರೆ ಎಂದರೆ ಏನು ಅರ್ಥ ಬರುತ್ತೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಕೇಸ್ ವಾಪಸ್ ಪಡೆಯಿರಿ.

ಆರ್.ಅಶೋಕ್, ವಿರೋಧ ಪಕ್ಷದ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News