ಯತೀಂದ್ರಗೆ ವರುಣಾ ಕ್ಷೇತ್ರವನ್ನು ಹೊರಗುತ್ತಿಗೆ ಕೊಟ್ಟಿದ್ದೀರಾ ? ; ಹೆಚ್‌ಡಿಕೆ ಪ್ರಶ್ನೆ

Update: 2023-11-19 08:27 GMT

ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ ಹೊರಗುತ್ತಿಗೆ ಕೊಟ್ಟಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀವು ಮತ್ತು ನಿಮ್ಮ ಮಗ ಫೋನ್ ನಲ್ಲಿ ಮಾತನಾಡಿದ್ದು ವರ್ಗಾವಣೆ ದಂಧೆಯ ಬಗ್ಗೆ ಎಂಬುದು ಸತ್ಯ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಅವರು, ವಿಡಿಯೋದಲ್ಲಿ ನಿಮ್ಮ ಮಗ ಡಾ.ಯತೀಂದ್ರ ಅವರು ಮತನಾಡಿದ ಆರ್.ಮಹದೇವು ಅವರಿಗೂ ವರುಣಾ ಕ್ಷೇತ್ರ, ಶಿಕ್ಷಣ ಇಲಾಖೆ ಹಾಗೂ ಸಿಎಸ್ ಆರ್ ಬಗ್ಗೆ ಅವರಿಗೆ ಸಂಬಂಧ ಇಲ್ಲ ಎಂದು ಕುಟುಕಿದ್ದಾರೆ.

ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ 'ಹೊರಗುತ್ತಿಗೆ'  ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ. ಅಷ್ಟೇ ಅಲ್ಲ, ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆ.ಡಿ.ಪಿ ಸಭೆ ನಡೆಸಲು ಹಾಗೂ ಸರಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆ.ಡಿ.ಪಿ ಪಟ್ಟ ಕಟ್ಟಿದ್ದೀರಿ! ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ ಎಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ, ಕ್ಯಾಶ್ ಫಾರ್ ಪೋಸ್ಟಿಂಗ್ ಹ್ಯಾಷ್ ಟ್ಯಾಗ್ ಜತೆ ಸಿಎಸ್ ಆರ್ ಎಂದರೆ ʼಕರಪ್ಟ್ ಸನ್ ಆಫ್ ಸಿದ್ದರಾಮಯ್ಯʼ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News