5,8,9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದುವರಿಸಲು ಹೈಕೋರ್ಟ್ ಆದೇಶ

Update: 2024-03-22 08:47 GMT

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿ ಆದೇಶಿಸಿದೆ.

5,8,9 ಹಾಗೂ 11 ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರಕಾರದ ಸುತ್ತೋಲೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ರದ್ದುಗೊಳಿಸಿ ಆದೇಶಿದೆ.

ರಾಜ್ಯ ಸರಕಾರ ಬೋರ್ಡ್ ಪರೀಕ್ಷೆ ನಡೆಸಬಹುದು.‌ ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಿಂದಲೇ ಇದನ್ನು ಮುಂದುವರಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಬೇಕು ಎಂದು ಸರಕಾರಕ್ಕೆ ಪೀಠ ಸೂಚಿಸಿದೆ. ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಸಲ್ಲಿಸಿದ ಮನವಿಯನ್ನೂ ಇದೇ ವೇಳೆ ಪೀಠ ತಿರಸ್ಕರಿಸಿದೆ. ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್​ನಲ್ಲೇ ಕೋರುವಂತೆ ಹೈಕೋರ್ಟ್ ಸ್ಪಷ್ಟನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News