ಅಮಿತ್ ಶಾ ಮಾತು ಕೇಳಿದರೆ ಪರಿಶಿಷ್ಟರು ದೇವರ ಪಾದ ಸೇರಬೇಕಾಗುತ್ತದೆ : ಡಾ.ಎಚ್.ಸಿ.ಮಹದೇವಪ್ಪ

Update: 2024-12-18 11:03 GMT

ಎಚ್.ಸಿ.ಮಹದೇವಪ್ಪ

ಬೆಂಗಳೂರು : ‘ಅಂಬೇಡ್ಕರ್ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ, ಅಸೂಕ್ಷ್ಮವಾದ ಹೇಳಿಕೆ, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಆದರೆ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಅಂಬೇಡ್ಕರ್ ಮತ್ತವರ ಸಂವಿಧಾನ ಎಂಬುದನ್ನು ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ ಎಂದು ಹೇಳಿದ್ದಾರೆ.

‘ಭಾರತದ ಸಂದರ್ಭದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್‌ ರನ್ನು ಬಿಟ್ಟು ಅಮಿತ್ ಶಾ ಹೇಳುವ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ, ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು. ಹೀಗಾಗಿ ಪುಣ್ಯ ಗಿಣ್ಯ ಎಂದು ಹೇಳುತ್ತಾ ಸಮಾಜಕ್ಕೆ ಕಂಟಕಪ್ರಾಯವಾದ ಮೌಢ್ಯತೆಯನ್ನು ಆಚರಿಸುವುದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್‌ ರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರುತ್ತಿರುವ ಅಮಿತ್ ಶಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಜೊತೆಗೆ ಯಾವ ಧರ್ಮ ಅಥವಾ ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಿಗೆ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ ನಮ್ಮ ಬದುಕನ್ನು ಬದಲಿಸುವ ಕೀಲಿಕೈ’ ಎಂಬ ಅಂಬೇಡ್ಕರ್ ಅವರ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News