ಸುವರ್ಣ ಸುದ್ದಿ ವಾಹಿನಿ, ವಿಶ್ವೇಶ್ವರ ಭಟ್ ವಿರುದ್ಧ ಖಾಸಗಿ ದೂರು ರದ್ದಿಗೆ ಹೈಕೋರ್ಟ್ ನಕಾರ
ಬೆಂಗಳೂರು:ಚಿತ್ರನಟಿ ರಮ್ಯಾ @ ದಿವ್ಯ ಸ್ಪಂದನಾ ಕನ್ನಡದ ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದಿಗೆ ಹೈಕೋರ್ಟ್ ನಿರಾಕರಿಸಿದೆ.
2013ರ ಮೇ 31ರಂದು ಕನ್ನಡ ಸಿನಿಮಾ ನಟಿಯರು ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿ ಸುದ್ದಿ ಬಿತ್ತರಿಸಿದ್ದಾರೆ. ಅಲ್ಲದೆ ಪದೇ ಪದೇ ತಮ್ಮ ಚಿತ್ರ ಮತ್ತು ವಿಡಿಯೊ ಪ್ರಸಾರ ಮಾಡಿದ್ದು, ನಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಆರೋಪಿಸಿ ನಟಿ ರಮ್ಯಾ @ ದಿವ್ಯ ಸ್ಪಂದನಾ ಕನ್ನಡದ ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಖಾಸಗಿ ದೂರಿನ ಸಂಜ್ಞೇಯ ಪರಿಗಣಿಸಿರುವ ಅಧೀನ ನ್ಯಾಯಾಲಯ ಪ್ರಕ್ರಿಯೆ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಅಧೀನ ನ್ಯಾಯಾಲಯ ವಿಚಾರಣೆ ರದ್ದು ಕೋರಿ ಕನ್ನಡದ ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿ ಆದೇಶಿದೆ. ವಿಚಾರಣೆ ವೇಳೆ ಅರ್ಜಿದಾರರು ಐಪಿಸಿ ಸೆಕ್ಷನ್ 499ರ ಅಡಿ ನಾಲ್ಕನೇ ವಿನಾಯಿತಿಗೆ ಒಳಪಡಲಿದ್ದಾರೆ. ಹೀಗಾಗಿ,ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 500ರ ಅಡಿ ವಿಚಾರಣೆ ನಡೆಸಲಾಗದು. ಇತರೆ ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ಸುದ್ದಿಯನ್ನು ಪ್ರಸಾರ ಮಾಡಲಾಗಿದೆ. ದೂರಿನಲ್ಲಿನ ಆರೋಪವು ಅರ್ಜಿದಾರರಿಗೆ ಅನ್ವಯವಾಗುವುದಿಲ್ಲ. ಅರ್ಜಿದಾರರಿಗೆ ಐಪಿಸಿ ಸೆಕ್ಷನ್ 499 ಅನ್ವಯಿಸಲಿದೆ (ಮಾನಹಾನಿಗೆ ಅನ್ವಯಿಸಲಾಗುವ ಐಪಿಸಿ ಸೆಕ್ಷನ್ 499ರ ಅಡಿ ಕೆಲವೊಂದು ವಿನಾಯಿತಿಗಳಿವೆ). ಆದರೆ, ರಮ್ಯಾ ಅವರಿಗೆ ಮಾನಹಾನಿ ಮಾಡುವುದು ಉದ್ದೇಶವಾಗಿರಲಿಲ್ಲ. ಹೀಗಾಗಿ ಪ್ರಕರಣ ರದ್ದಿಗೆ ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಆರೋಪಿತ ವ್ಯಕ್ತಿಗಳು ರಮ್ಯಾ ಅವರ ಘನತೆಗೆ ಹಾನಿಯಾಗುತ್ತದೆ ಎಂಬ ಅರವುವಿದ್ದರೂ ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದಾರೆ ಎಂಬುದು ದೂರುದಾರೆಯ ವಾದವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಐಪಿಸಿ ಸೆಕ್ಷನ್ 500ರ ಅಡಿ ವಿಚಾರಣೆ ನಡೆಯುವ ಪ್ರಕರಣವಿಲ್ಲ ಎಂದು ಹೇಳಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿಚಾರಣೆ ಎದುರಿಸಬೇಕಿದೆ. ಸುದ್ದಿಪ್ರಸಾರದ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಮ್ಯಾ ಅವರು ಆರೋಪಿಗಳ ವಿರುದ್ಧ ಮಾನಹಾನಿಗೆ ಅನ್ವಯಿಸುವ ಐಪಿಸಿ ಸೆಕ್ಷನ್ 500ರ ಅಡಿ ಕ್ರಮಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು. ರಮ್ಯಾ ಅವರ ಹೇಳಿಕೆ ದಾಖಲಿಸಿಕೊಂಡಿದ್ದ ವಿಚಾರಣಾಧೀನ ನ್ಯಾಯಾಲಯವು 2016ರ ಜೂನ್ 13ರಂದು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ಆರೋಪಿಗಳು ಹೈಕೋರ್ಟ್ ಮೊರೆಹೋಗಿದ್ದರು.