ಮಕ್ಕಳ ಆಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ ಎಂದು ನೀಡಿದ್ದ ಆದೇಶ ಹಿಂಪಡೆದ ಹೈಕೋರ್ಟ್
ಬೆಂಗಳೂರು: ಅಂತರ್ಜಾಲದ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b) ಅಡಿ ಅಪರಾಧವಾಗುವುದಿಲ್ಲ ಎಂಬುದಾಗಿ ಜುಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ.
ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣ ರದ್ದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಕುರಿತ ಆದೇಶವನ್ನು ಹಿಂಪಡೆಯಲು ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜುಲೈ 10ರಂದು ಪ್ರಕಟಿಸಿರುವ ಆದೇಶ ದೋಷಪೂರಿತವಾಗಿದೆ ಎಂದು ತಿಳಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b)ಯಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸುವುದು ಮತ್ತು ಅದನ್ನು ವಿದ್ಯುನ್ಮಾನ ಉಪಕರಣಗಳ ಮೂಲಕ ಹಂಚಿಕೊಳ್ಳುವುದಕ್ಕೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅರ್ಜಿದಾರರು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿಲ್ಲ. ಜೊತೆಗೆ, ಅದನ್ನು ಯಾರೊಂದಿಗೂ ಹಂಚಿಕೊಂಡಿಲ್ಲ, ಕೇವಲ ವೀಕ್ಷಿಸಿದ್ದಾರೆ. ಹೀಗಾಗಿ, ಸೆಕ್ಷನ್ 67B(b) ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ಈ ಹಿಂದೆ ತಿಳಿಸಿತ್ತು.ಆದರೆ, ಅರ್ಜಿದಾರರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b) ಅಡಿ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಮಕ್ಕಳ ಆಶ್ಲೀಲ ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕುವುದು, ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು ಹಾಗೂ ಪ್ರಚಾರ ಮಾಡುವುದೂ ಸೇರಿದೆ. ಆದ್ದರಿಂದ ಸೆಕ್ಷನ್ 67B(b) ಪ್ರಕಾರ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಲು ಅವಕಾಶವಿಲ್ಲ. ಹೀಗಾಗಿ, ಆದೇಶ ಹಿಂಪಡೆಯುತ್ತಿರುವುದಾಗಿ ಪೀಠ ಹೇಳಿದೆ.
ನ್ಯಾಯಾಧೀಶರೂ ಮನುಷ್ಯರೇ: ನ್ಯಾಯಾಧೀಶರೂ ಮನುಷ್ಯರೇ ಆಗಿದ್ದಾರೆ. ನಾವೂ ತಪ್ಪುಗಳಿಂದ ಹೊರತಲ್ಲ. ನಾವು ಮಾಡಿರುವ ತಪ್ಪು ಅರಿವಿಗೆ ಬಂದಿದ್ದು, ಅದನ್ನು ಮುಂದುವರೆಸುವುದು ಸಾಧುವಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರ ವ್ಯಕ್ತಿ 2023ರ ಮಾರ್ಚ್ 23ರಂದು ಮಧ್ಯಾಹ್ನ 3.30ರಿಂದ 4.40 ಗಂಟೆ ಅವಧಿಯಲ್ಲಿ ತನ್ನ ಮೊಬೈಲ್ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪ್ರಾರಂಭಿಸಿರುವ ಪೋರ್ಟಲ್ ಮೂಲಕ ಮಾಹಿತಿ ಪಡೆದಿದ್ದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದ ಮಾಹಿತಿಯಂತೆ ಬೆಂಗಳೂರು ನಗರ ಸಿಐಡಿ ಘಟಕ ಬೆಂಗಳೂರು ಸೈಬರ್ ಕ್ರೈಂ ಠಾಣೆಗೆ ವರದಿಯೊಂದನ್ನು ರವಾನಿಸಿತ್ತು.
ಈ ವರದಿಯನ್ನು ಪರಿಶೀಲಿಸಿ ಮಕ್ಕಳ ಆಶ್ಲೀಲ ವಿಡಿಯೋ ಪರಿಶೀಲಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b) ಅಡಿ ಘಟನೆ ನಡೆದ ಎರಡು ತಿಂಗಳ ಬಳಿಕ, ಅಂದರೆ 2023ರ ಮೇ 3ರಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 'ಅರ್ಜಿದಾರರು ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದಾರೆ. ಆದರೆ, ಯಾವುದೇ ವಿಡಿಯೋವನ್ನು ಸಿದ್ಧಪಡಿಸಿಲ್ಲ ಮತ್ತು ಯಾರೊಂದಿಗೂ ಹಂಚಿಕೆ ಮಾಡಿಲ್ಲ. ಹೀಗಾಗಿ, ಪ್ರಕರಣ ರದ್ದು ಮಾಡಬೇಕು' ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್, ಮಕ್ಕಳ ಆಶ್ಲೀಲ ವಿಡಿಯೋಗಳನ್ನು ನೋಡಿರುವುದಾಗಿ ಅರ್ಜಿದಾರರೇ ಒಪ್ಪಿಕೊಂಡಿದ್ದಾರೆ. ಇದು ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆಯಾಗಿದೆ. ಆದ್ದರಿಂದ ವಿಚಾರಣೆ ಮುಂದುವರೆಯಬೇಕಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದೆ.