ದಾಖಲೆಯಲ್ಲಿ ನನ್ನ ಸಹಿ ಪೋರ್ಜರಿ ಮಾಡಲಾಗಿದೆ, ಕಾನೂನಾತ್ಮಕವಾಗಿಯೇ ಹೋರಾಟ ನಡೆಸುತ್ತೇನೆ : ಎಚ್‌ಡಿಕೆ
ಬೆಂಗಳೂರು: ನಾನು ಕೇಂದ್ರ ಸಚಿವನಾಗಿದ್ದೇನೆ ಎಂಬ ಹೊಟ್ಟೆಕಿಚ್ಚಿಗೆ ರಾಜ್ಯ ಕಾಂಗ್ರೆಸ್ ಸರಕಾರ ನನ್ನ ಮೇಲೆ ಹಗೆ ಸಾಧಿಸುತ್ತಿದೆ. ಯಾವತ್ತೊ ಸತ್ತು ಹೋದ ಪ್ರಕರಣವನ್ನು, ನನ್ನ ಸಹಿ ಇಲ್ಲದ ಪ್ರಕರಣವನ್ನು ಇಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಾಯಿ ವೆಂಕಟೇಶ್ವರ ಕಂಪನಿಗೆ ನಾನು ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ. ಅವರು ಗಣಿಗಾರಿಕೆಯನ್ನೂ ಮಾಡಿಲ್ಲ, ಕೇಂದ್ರ ಸರಕಾರ ಅವರಿಗೆ ಅನುಮತಿಯನ್ನೇ ಕೊಟ್ಟಿಲ್ಲ, ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿದ್ದ ಮೇಲೆ ಎಸ್ ಐಟಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಹೇಗೆ ಅನುಮತಿ ಕೋರುತ್ತದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯ ಸರಕಾರ ನನ್ನ ವಿರುದ್ಧ ಹೂಡಿರುವ ಷಡ್ಯಂತ್ರಕ್ಕೆ ಹೆದರಿ ಓಡುವ ಜಾಯಮಾನ ನನ್ನದಲ್ಲ. ಸಾಯಿ ವೆಂಕಟೇಶ್ವರ ಮಿನರಲ್ಸ್ ವಿಚಾರದಲ್ಲಿ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕು. ನೆಲದ ಕಾನೂನಿಗೆ ನಾವು ತಲೆಬಾಗಲೇಬೇಕು ಎಂದರು.
ತನಿಖೆ ಮಾಡಲು ಎಷ್ಟು ದಿನ ಬೇಕು? :
ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಈಗ ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಮಂತ್ರಿ ಅಗಿದ್ದೇನಲ್ಲವೇ, ಅದನ್ನು ಸಹಿಸಿಕೊಳ್ಳುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆ ಮಾಡಲು ಎಷ್ಟು ದಿನ ಬೇಕು?. 2014ರಲ್ಲಿ ನಾನು ನ್ಯಾಯಾಲಯಕ್ಕೆ ಹೋಗಿದ್ದು. ಇವರಿಗೆ ತನಿಖೆ ಮಾಡಲು ಇಷ್ಟು ದಿನ ಬೇಕಾ? ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ, ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಸಾಯಿ ವೆಂಕಟೇಶ್ವರ ದಾಖಲೆಯಲ್ಲಿರುವುದು ನನ್ನ ಬರಹ ಅಲ್ಲ. 6-10-2007ರಲ್ಲಿ ಇದೆಲ್ಲಾ ನಡೆದಿದೆ. ಅದು ನನ್ನ ಸಹಿಯೇ ಅಲ್ಲ, ಯಾರು ಬರೆದುಕೊಂಡಿದ್ದಾರೊ ಗೊತ್ತಿಲ್ಲ. ನಾನು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ. 20 ಲಕ್ಷ ರೂ. ಹಣವನ್ನು ಅಧಿಕಾರಿಯೊಬ್ಬ ತನ್ನ ಮಗನ ಖಾತೆಗೆ ಕಂಪನಿಯಿಂದ ವರ್ಗಾವಣೆ ಮಾಡಿಸಿಕೊಂಡ ವಿಷಯ ಗೊತ್ತಾದ ಮೇಲೆಯೇ ನಾನು ಎಚ್ಚೆತ್ತುಕೊಂಡಿದ್ದು. ತಪ್ಪು ನೀವು ಇಟ್ಟುಕೊಂಡು ರಾಜ್ಯಪಾಲರನ್ನು, ಕೇಂದ್ರವನ್ನು ಯಾಕೆ ಎಳೆದು ತರುತ್ತೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಿರುದ್ಧ 61 ಕೇಸ್ ದಾಖಲಾಗಿವೆ :
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 61 ಕೇಸ್ ದಾಖಲಾಗಿವೆ. ಹಾಗಾದರೆ, ಅವರು ಎಷ್ಟು ಸಲ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ ಸಚಿವರು, ಸಿದ್ದರಾಮಯ್ಯ ವಿರುದ್ಧದ 61 ಕೇಸುಗಳ ಪೈಕಿ 50 ಕೇಸುಗಳ ತನಿಖೆಯೇ ಆಗಿಲ್ಲ ಎಂದು ಪತ್ರಿಕಾ ವರದಿ ಹೇಳುತ್ತದೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಸಿಎಂ ಮನೆಯಿಂದಲೇ ನನಗೆ ಮಾಹಿತಿ ಬರುತ್ತಿದೆ :
ನಾನು ಈ ಸರಕಾರದ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮೊದಲ ದಿನದಿಂದಲೂ ಮಾತನಾಡುತ್ತಲೇ ಇದ್ದೇನೆ. ಇದನ್ನು ಸಹಿಸಲಾಗದೆ ಸರಕಾರದಲ್ಲಿ ದೊಡ್ಡ ಮಟ್ಟದ ಒಳಸಂಚು ನಡೆಯುತ್ತಿದೆ. ನನಗೆ ಖುದ್ದು ಸಿಎಂ ಮನೆಯಿಂದಲೇ ಮಾಹಿತಿ ಬರುತ್ತಿದೆ. ಸಿಎಂ ಕಾನೂನು ತಜ್ಞರು ಏನು ಮಾಡ್ತಿದ್ದಾರೆ, ಏನೆಲ್ಲಾ ಶೋಧ ಮಾಡುತ್ತಾ ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ವಿಷಯ ನನಗೆ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.