ಜನರ ಗಮನ ಬೇರೆಡೆ ಸೆಳೆಯಲು ʼವಕ್ಫ್ ಆಸ್ತಿʼ ವಿಷಯ ಪ್ರಸ್ತಾಪ : ಎಚ್‍ಡಿಕೆ
ಬೆಂಗಳೂರು: ಮುಡಾ, ವಾಲ್ಮೀಕಿ ಹಗರಣಗಳನ್ನು ಮರೆಮಾಚಲು, ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಸರಕಾರವೇ ವಕ್ಫ್ ಆಸ್ತಿ ವಿಷಯವನ್ನು ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಗುರುವಾರ ಇಲ್ಲಿನ ಚನ್ನಪಟ್ಟಣ ಚುನಾವಣಾ ಪ್ರಚಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸರಕಾರ ಜಾತಿ-ಜಾತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಒಂದು ಸಮುದಾಯದ ತೊಟ್ಟಿಲು ತೂಗುತ್ತದೆ, ಇನ್ನೊಂದು ಸಮುದಾಯವನ್ನು ಚಿವುಟುತ್ತಿದೆ. ಇಂತಹ ಹೀನ ರಾಜಕೀಯವನ್ನು ಸಿಎಂ ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ ಎಂದು ದೂರಿದರು.
ವಕ್ಫ್ ಆಸ್ತಿ ವಿಷಯಕ್ಕೆ ರಾಜ್ಯ ಸರಕಾರವೇ ನೇರ ಹೊಣೆ. ತಾನು ಮಾಡಿದ ಸತತ ತಪ್ಪುಗಳಿಂದ ಸರಕಾರ ವಕ್ಫ್ ಆಸ್ತಿ ವಿಷಯದ ಮೂಲಕ ರಕ್ಷಣೆ ಪಡೆಯುವ ಹುನ್ನಾರ ನಡೆಸಿದೆ. ಇದರಿಂದ ಮುಂದೆ ರಾಜ್ಯವನ್ನು ಕಾಂಗ್ರೆಸ್ ಸರಕಾರ ದೊಡ್ಡ ಸಂಘರ್ಷಕ್ಕೆ ದೂಡಿ, ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ಅವರು ಆರೋಪ ಮಾಡಿದರು.
ಕಾಂಗ್ರೆಸ್ ಸರಕಾರ ತನ್ನ ವಿರುದ್ಧ ಏನಾದರೂ ಗಂಭೀರ ಆರೋಪ ಬಂದಾಗ ಆ ಪಕ್ಷದ ನಾಯಕರು ಎಚ್ಚೆತ್ತುಕೊಳ್ಳುತ್ತಾರೆ. ಆ ವಿಷಯವನ್ನು ತಿರುಚಲು ಇನ್ನಿಲ್ಲದ ತಂತ್ರಗಾರಿಕೆ ಮಾಡುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ ಎಂದು ಅವರು ಟೀಕಿಸಿದರು.