ಗನ್ ತೋರಿಸಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ ಡಿಕೆಶಿ : ಎಚ್‍ಡಿಕೆ ಆರೋಪ
ಬೆಂಗಳೂರು : ‘ಕಂಡ ಕಂಡವರ ಆಸ್ತಿಗಳನ್ನು ಸರಣಿಯಾಗಿ ಕಬ್ಜ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಮಾಡುತ್ತಿರುವ ಅನಾಚಾರ, ಅಕ್ರಮಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಮೈಸೂರು ಚಲೋ ಪಾದಯಾತ್ರೆ ಮೂರನೆ ದಿನ ಚನ್ನಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಆ ನಿವೇಶನಕ್ಕೆ ಸಂಪೂರ್ಣವಾಗಿ ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಒಂದು ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ, ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯಪ್ರವೇಶ ಮಾಡುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಅವರನ್ನು ಕರೆಸಿ ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಅವರ ಹಾಗೆ ನಾವು ಮಾಡಿಲ್ಲ ಎಂದು ಹೇಳಿದರು.
‘ಗನ್ ಇಟ್ಟು ವಿಧವೆ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡವರು ನೀವು, ಅನ್ಯಾಯವಾಗಿ ಕಂಡೋರ ಆಸ್ತಿಯನ್ನು ಕಬ್ಜ ಮಾಡಿದವರು ನೀವು. ಇಂತಹ ಕೆಟ್ಟ ಹಿನ್ನೆಯ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ಬನ್ನಿ, ಅಜ್ಜಯನ ಮುಂದೆ ಆಗಲಿ, ನಾಡದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಪ್ರಮಾಣ ಮಾಡೋಣ. ಬನ್ನಿ ಚರ್ಚೆ ಮಾಡೋಣ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಇದೀಗ ಚನ್ನಪಟ್ಟಣಕ್ಕೆ ಬಂದು ಏನೋ ಉದ್ದಾರ ಮಾಡುತ್ತೇವೆಂದು ಅಣ್ಣ-ತಮ್ಮ ಬಂದಿದ್ದಾರೆ. ನೂರಾರು ವರ್ಷ ಬಾಳಿ ಬದುಕಿರುವ ಮನೆಗಳಿಗೆ ಈಗ ಬಂದು ಹಕ್ಕುಪತ್ರ ಕೊಡುತ್ತಾರಂತೆ. ಹಾಗಾದರೆ, ರಾಜ್ಯದಲ್ಲಿ ನಿಮ್ಮ ಸರಕಾರ ಬಂದು ಒಂದೂವರೆ ವರ್ಷ ಆಯಿತಲ್ಲವೇ. ಇಷ್ಟು ದಿನ ಏನು ಮಾಡ್ತಿದ್ರಪ್ಪ? ಎಂದು ಅವರು ಪ್ರಶ್ನಿಸಿದರು.
ಕನಕಪುರದ ಎಷ್ಟು ದಲಿತ ಕುಟುಂಬಗಳ ಹಾಳು ಮಾಡಿದ್ದೀರಿ ನೀವು. ಆ ಜನ ಕಣ್ಣಲ್ಲಿ ನೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಕುಮಾರಸ್ವಾಮಿ ರೈತನ ಮಗ ಅಲ್ಲ ಎಂದಿದ್ದಾರೆ. ಬನ್ನಿ ಬಿಡದಿಗೆ, 20 ಟನ್ ಕೊಬ್ಬರಿ ಬೆಳೆದಿದ್ದೇನೆ. ತೆಂಗು, ಬಾಳೆ, ಅಡಕೆಯಲ್ಲಿ 50ಲಕ್ಷ ರೂ.ರೈತನಾಗಿ ಸಂಪಾದನೆ ಮಾಡಿದ್ದೇನೆ. ನಿಮ್ಮಿಂದ ಇದು ಸಾಧ್ಯವೇ? ಎಂದು ಅವರು ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಕಾಂಗ್ರೆಸ್ ಸರಕಾರದಿಂದ ಆಗಿಲ್ಲ. ನಾನು, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಕೆರೆಗಳನ್ನು ತುಂಬಿಸಲಾಯಿತು. ಯೋಗೇಶ್ವರ್ ಮಂತ್ರಿಯಾಗಿ ಕೆಲಸ ಮಾಡಿದರು. ಕಾಂಗ್ರೆಸ್‍ನವರು ಏನೂ ಮಾಡಿಲ್ಲ. ರಾಜ್ಯದಲ್ಲಿ ನಿಮ್ಮ ಆಡಳಿತ, ನಿರ್ವಹಣೆ ಕೆಟ್ಟದಾಗಿದೆ. ಗ್ಯಾರಂಟಿ ಎಂದು ಕೊಟ್ಟಿದ್ದೀರಿ. ಯಾರಿಗೆ ಲಾಭವಾಗಿದೆ ಅದರಿಂದ, ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಗಿಫ್ಟ್ ಕೂಪನ್ ಹಂಚಿ ಗೆದ್ದರು: ‘ನಾವು 136 ಸೀಟು ಗೆದ್ದು ಅಧಿಕಾರಕ್ಕೆ ಬಂದಿದೇವೆಂದು ಕಾಂಗ್ರೆಸ್ ನಾಯಕರು ಕೊಚ್ಚಿಕೊಳ್ಳುತ್ತಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೂಪನ್ ಹಂಚಿ ರಾಜಕಾರಣ ಮಾಡಿದೆ. ಲುಲು ಮಾಲ್ ಕೂಪನ್ ಕೊಟ್ಟದ್ದಾರೆ. 3 ಸಾವಿರ, 5ಸಾವಿರ ರೂ.ಕೂಪನ್ ಕೊಟ್ಟಿದ್ದರು. ಅದನ್ನು ತೆಗೆದುಕೊಂಡು ಹೋಗಿ ಲುಲು ಮಾಲ್‍ನಲ್ಲಿ ಕೊಟ್ಟರೆ ಅದರಲ್ಲಿ ದುಡ್ಡೇ ಇಲ್ಲ. ಜನರಿಗೆ ಕಾಂಗ್ರೆಸ್‍ನವರು ಮೋಸ ಮಾಡಿದ್ದು ಹೀಗೆ?’ ಎಂದು ಎಚ್‌ಡಿಕೆ ಆರೋಪಿಸಿದರು.