ಡಿಕೆಶಿಗೆ ಧೈರ್ಯವಿದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು: ಎಚ್‍ಡಿಕೆ ವಾಗ್ದಾಳಿ
ಹೊಸದಿಲ್ಲಿ: ಧೈರ್ಯ ಎನ್ನುವುದು ಇದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು.ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಪುಂಸಕ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೆ ವ್ಯಕ್ತಿತ್ವ ಎನ್ನುವುದು ಇದೆಯಾ?. ಧೈರ್ಯ ಎನ್ನುವುದು ಇದ್ದರೆ ಗಂಡಸ್ತನದಿಂದ ರಾಜಕೀಯ ಮಾಡಬೇಕು. ನಪುಂಸಕ ಮಾಡುವ ಕೆಲಸ ಮಾಡುತ್ತಿದ್ದಾನೆ ಎಂದು ಟೀಕಿಸಿದರು.
ಯಾರ ಮಗನನ್ನು ಬೆಳೆಸಬೇಕು ಎಂದು ಜನ ನಿರ್ಧಾರ ಮಾಡುತ್ತಾರೆ. ಒಳ್ಳೆಯದು, ಕೆಟ್ಟದು ಏನು ಎನ್ನುವುದು ಅವರಿಗೆ ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಮೊದಲು ನೆಟ್ಟಗೆ ಬದುಕು ಎಂದು ಅವರು ಹೇಳಿದರು.
ಶಿವಕುಮಾರ್ ಯೋಗ್ಯತೆ, ಹಣೆಬರಹ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿನ್ನ ಬಗ್ಗೆ ನನ್ನಲ್ಲಿರುವ ಮಾಹಿತಿ ತೆಗೆದಿಟ್ಟರೆ ನೀನು ಬದುಕಲು ಕಷ್ಟವಾಗುತ್ತದೆ. ನಮ್ಮ ಕುಟುಂಬದ ವಿರುದ್ಧ ನೀನು ಏನೆಲ್ಲಾ ಸಂಚು ಮಾಡಿದೆ, ರೇವಣ್ಣ ಕುಟುಂಬ ಮುಗಿಸಲು ಏನು ಕುತಂತ್ರ ಮಾಡಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನದು ಪಾರಾದರ್ಶಕ ಆಡಳಿತ. ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಂಪಣ್ಣ ವರದಿ ಏನಾಯಿತು? ಸದನ ಸಮಿತಿ ವರದಿ ಎಲ್ಲಿ ಇಟ್ಕೊಂಡಿದ್ದೀರಿ? ಎಂದ ಅವರು, ಇವತ್ತಿನ ಕಾಂಗ್ರೆಸ್ ನಾಯಕರ ಜನಾಂದೋಲನ ನಡೆಯಿತು. ಇವರಿಗೆ ನಾಚಿಕೆ ಆಗಬೇಕು. ವಿರೋಧ ಪಕ್ಷದಲ್ಲಿದ್ದಾಗ ಬೊಗಳೆ ಬಿಟ್ಟರು. ಸಾಕ್ಷಿಗಳಿಲ್ಲದೇ ಅವರು ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದರು ಎಂದು ಆಪಾದಿಸಿದರು.