ಎಚ್‌.ಡಿ.ರೇವಣ್ಣ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಕೋರ್ಟ್

Update: 2024-05-17 14:30 GMT

ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಶಾಸಕ ಎಚ್ ಡಿ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರಕ್ಕೆ(ಮೇ 20) ಕಾಯ್ದಿರಿಸಿದ್ದು, ಅಲ್ಲಿಯ ವರೆಗೆ ಮಧ್ಯಂತರ ಜಾಮೀನು ಆದೇಶ ಎತ್ತಿಹಿಡಿದಿದೆ.

ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್ ಅವರು ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದರು. ಈ ವೇಳೆ, ಗುರುವಾರ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ಮೇ 20ರ ವರೆಗೆ ಮುಂದುವರಿಯಲಿದ್ದು, ಅಂದು ಜಾಮೀನು ಆದೇಶ ಪ್ರಕಟಿಸಲಾಗುವುದೆಂದು ಉಲ್ಲೇಖಿಸಿದರು.

ವಿಚಾರಣೆ ವೇಳೆ ಸರಕಾರದ ಪರ ಎಸ್‍ಪಿಸಿ, ಹೊಳೆನರಸೀಪುರ ಪ್ರಕರಣದಲ್ಲಿ ಈ ಹಿಂದೆ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ. ಇದೀಗ ಅತ್ಯಾಚಾರ ಸೆಕ್ಷನ್ 376ನ್ನು ಸೇರ್ಪಡೆ ಮಾಡಲಾಗಿದೆ. ಸಂತ್ರಸ್ತೆಗೆ ಜೀವ ಭಯ ಇದೆ ಎಂಬುದಾಗಿ ಹೇಳಲಾಗಿದೆ. ಹೀಗಾಗಿ, ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದರು.

ಇನ್ನೂ, ಅತ್ಯಾಚಾರ ಆರೋಪ ಸಾಬೀತಾದಲ್ಲಿ ಅಂತಹ ಪ್ರಕರಣಗಳ ವಿಚಾರಣೆಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಗೆ ಅವಕಾಶವಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಹಲವು ತೀರ್ಪುಗಳಲ್ಲಿ ತಿಳಿಸಲಾಗಿದೆ. ಅಲ್ಲದೇ ಅತ್ಯಾಚಾರ ಆರೋಪ ಸಂಬಂಧದ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬಾರದು ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಅದರಲ್ಲೂ ಇದೊಂದು ಲೈಂಗಿಕ ಪ್ರಕರಣವಾಗಿದ್ದು, ಇನ್ ಕ್ಯಾಮೆರಾ ವಿಚಾರಣೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಆಗ ನ್ಯಾಯಾಧೀಶರು ಅರ್ಜಿಗೆ ಸಂಬಂಧ ವಾದ ಮಂಡಿಸಲು ಸೂಚನೆ ನೀಡಿದರು.

ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ ನೀಡಿ, ಇದೊಂದು ರೀತಿಯಲ್ಲಿ ಅರೇಬಿಯನ್ ನೈಟ್ ಕತೆಯ ರೀತಿಯಲ್ಲಿದೆ. ಸಂತ್ರಸ್ಥೆ ದೂರನ್ನು ಟೈಪ್ ಮಾಡಿ ದಾಖಲಿಸಲಾಗಿದೆ. ಸಿಆರ್ ಪಿಸಿ 154ರ ಅಡಿ ಅತ್ಯಾಚಾರ ಆರೋಪ ಪ್ರಕರಣಗಳನ್ನು ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆ ಹೇಳಿಕೆಯನ್ನು ವಿಡಿಯೊ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯ್ದೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ ಇದನ್ನು ಪಾಲಿಸಲಾಗಿಲ್ಲ. ಪುರುಷ ದೂರು ದಾಖಲಿಸಿ, ಎಫ್‍ಐಆರ್ ಅನ್ನು ಕಾನೂನು ಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News