ತಲೆ ಹರಟೆ ಸಂಸದನನ್ನು ಪಕ್ಷದಿಂದ ದೂರ ಇಡಬೇಕು: ಪ್ರತಾಪ್‌ ಸಿಂಹ ವಿರುದ್ಧ ಬಿಜೆಪಿ ಮುಖಂಡನ ಆಕ್ರೋಶ

Update: 2023-10-11 08:26 GMT

ಮೈಸೂರು: ಬಿಜೆಪಿ ಪಕ್ಷದ ಹೆಸರನ್ನು ಬಳಸಿಕೊಂಡು ಸಂಸದ ಪ್ರತಾಪ್ ಸಿಂಹ ಮಹಿಷ ದಸರಾಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ವಿಚಾರ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯೇ ಆಗಿಲ್ಲ. ಹಾಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮಹಿಷ ದಸರಾಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ಗಿರಿಧರ್ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಅವರವರ ಧಾರ್ಮಿಕ ಆಚರಣೆಗರ ಅವಕಾಶ ಕಲ್ಪಿಸಲಾಗಿದೆ. ಮಹಿಷ ದಸರಾ ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಲು ಯಾರು? ಈ ಇದು ಪ್ರತಾಪ್ ಸಿಂಹರ ವೈಯಕ್ತಿ ಹೇಳಿಕೆಯಷ್ಟೆ. ಈ ವಿಚಾರವಾಗಿ ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನವೇ ಆಗಿಲ್ಲ, ಶಾಸಕ ಶ್ರೀವತ್ಸ ಅವರಿಗೂ ಮಹಿಷ ದಸರಾ ವಿರೋಧ ಇಷ್ಟವಿಲ್ಲ, ತಲಹರಟೆ ಪ್ರತಾಪ್ ಸಿಂಹ ಅವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದ ಅವರು ವಿರೋಧ ಮಾಡುತ್ತಿದ್ದಾರೆ ಎಂದರು.

ʼʼಪ್ರತಾಪ್ ಸಿಂಹನಿಗೂ ಮೈಸೂರಿಗೂ ಏನು ಸಂಬಂಧ ನಮ್ಮ ಪಕ್ಷ 2014 ರಲ್ಲಿ ಅವರಿಗೆ ಟಿಕೆಟ್ ನೀಡಿತ್ತು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲಿ ಎಂದು ಪ್ರತಾಪ್ ಸಿಂಹ ನನ್ನು ಗೆಲ್ಲಿಸಿದರು. ಗೆದ್ದ ನಂತರ ಈತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚಾಮುಂಡಿ ಬೆಟ್ಟವನ್ನು ಈತ ಗುತ್ತಿಗೆ ಪಡೆದಿಲ್ಲ, ಇಲ್ಲಿಗೆ ಎಲ್ಲಾಧರ್ಮದವರು ಹೋಗುತ್ತಾರೆʼʼ ಎಂದು ಹರಿಹಾಯ್ದರು.

ಸಂಸದ ಪ್ರತಾಪ್ ಸಿಂಹ ಈ ಹಿಂದೆ ಮುಸಲ್ಮಾನರ ವಿರುದ್ಧ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಹಿನ್ನಡೆಯುಂಟು ಮಾಡಿದರು. ಈಗ ದಲಿತರ ವಿರುದ್ಧ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡುತ್ತಿದ್ದಾರೆ. ನಮಗೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಬೇಕು. ಹಾಗಾಗಿ ಇಂತಹ ತಲೆಹರಟೆ ಸಂಸದನನ್ನು ಪಕ್ಷದಿಂದ ದೂರ ಇಡಬೇಕು ಎಂದು ಆಗ್ರಹಿಸಿದರು.

ಪ್ರತಾಪ್ ಸಿಂಹ ಅವರಿಗೆ ಮೈಸೂರಿನ ಇತಿಹಾಸ ಏನು ಗೊತ್ತು, ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಮೈಸೂರಿನ ಮಹರಾಜರು ಏಕೆ ಮಹಿಷನ ಅಷ್ಟು ದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರು. ಅಂತಹ ಪ್ರತಿಮೆಯನ್ನೇ ಅಪದ್ಧ, ಅಸಹ್ಯ ಎಂದು ಹೇಳುವ ಮೂಲಕ ಮೈಸೂರು ಮಹರಾಜರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ʼನಾವುಗಳು ಸಣ್ಣವರಿದ್ದಾಗ ನಮ್ಮ ತಂದೆ ತಾಯಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಮಹಿಷನ ಮುಂದೆ ನಿಲ್ಲಿಸಿ ಪೂಜೆ ಮಾಡಿ ಮಹಿಷನ ಕಾಲಿನ ಕೆಳಗಡೆ ನುಗ್ಗಿಸುತ್ತಿದ್ದರು. ಯಾಕೆಂದರೆ ನನ್ನ ಮಗ ಮಹಿಷನ ರೀತಿ ಇರಲಿ ಎಂದು. ಇದೇ ಮಹಿಷನ ಪ್ರತಿಮೆ ಮುಂಭಾಗ ದಲಿತ ಹೋರಾಟಗಾರ ಮಂಟೇಲಿಂಗಯ್ಯ ಅಮವಾಸ್ಯೆ ದಿನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಮಹಿಷ ದಸರಾ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಇಂತಹದರಲ್ಲಿ ಮಹಿಷ ಹೇಗೆ ಕೆಟ್ಟವನಾಗುತ್ತಾನೆʼ ಎಂದು ಪ್ರಶ್ನಿಸಿದರು. 

ಹಾಗಾಗಿ ಮಹಿಷ ದಸರಾಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಪ್ರತಾಪ್ ಸಿಂಹ ಐದು ಸಾವಿರ ಜನ ಸೇರುತ್ತಾರೆ ಎಂದಾಕ್ಷಣ ಬಿಜೆಪಿ ಪಕ್ಷದ ಕಾರ್ಯಕರ್ತರು ಯಾರೂ ಬರುವುದಿಲ್ಲ. ಕೂಡಲೇ ಜಿಲ್ಲಾಡಳಿತ ಮಹಿಷ ದಸರಾಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. 

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News