ಆರೋಗ್ಯ ಕ್ಷೇತ್ರದ ಸುಧಾರಣೆ: ತಜ್ಞರೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಸಭೆ
ಬೆಂಗಳೂರು: ರಾಜ್ಯದಲ್ಲಿ ನೂತನ ಬಜೆಟ್ ಮಂಡನೆಗೆ ತಯಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ವೈದ್ಯಕೀಯ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ಹೆಚ್ಚು ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ತಜ್ಞರ ಸಲಹೆಗಳನ್ನು ಆಲಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಚಿಕಿತ್ಸೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯತೆಯನ್ನು ಬಹುತೇಕ ತಜ್ಞರು ಸಭೆಯಲ್ಲಿ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳು ಸಾಕಷ್ಟಿವೆ. ಅದಕ್ಕೆ ಕೊರತೆ ಇಲ್ಲ ಎಂದರು.
ಆದರೆ ಕೆಲವೆಡೆ ಸಿಬ್ಬಂದಿಗಳ ಕೊರತೆಯಿಂದ ಐಸಿಯು ಬೆಡ್‍ಗಳನ್ನು ಹೆಚ್ವಿನ ಸಂಖ್ಯೆಯಲ್ಲಿ ಒದಗಿಸುತ್ತಿಲ್ಲ. ಐಸಿಯು ಬೆಡ್ ಗಳು ಜನರಲ್ ಬೆಡ್ ಗಳಾಗಿವೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ನಲ್ಲಿ ಯೋಜನೆ ರೂಪಿಸುವುದಾಗಿ ಅವರು ತಿಳಿಸಿದರು.
ನರ್ಸಿಂಗ್ ಕೋರ್ಸ್ ಗಳನ್ನು ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಸಭೆಯಲ್ಲಿ ತಜ್ಞರು ಸಲಹೆ ನೀಡಿದರು. ಕೇವಲ ರಾಜ್ಯವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಆರೋಗ್ಯ ಸಿಬ್ಬಿಂದಿಗಳನ್ನು ತಯಾರಿಸುವತ್ತ ಆರೋಗ್ಯ ಇಲಾಖೆ ಗಮನ ಹರಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಎಷ್ಟು ಆರೋಗ್ಯ ಸಿಬ್ಬಂದಿಗಳು ಇದ್ದರು ಸಾಲದು. ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಆರೋಗ್ಯ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ನರ್ಸಿಂಗ್ ಕೋರ್ಸ್ ಗಳನ್ನು ಪ್ರಾರಂಭಿಸುವುದು ಉತ್ತಮ ಎಂದು ಡಾ.ದೇವಿ ಪ್ರಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆಗಳಿಗೆ ಸರಕಾರ ನೀಡುತ್ತಿರುವ ಚಿಕಿತ್ಸಾ ದರ ಹೆಚ್ಚಾಗಬೇಕು. ಈಗ ನೀಡುತ್ತಿರುವ ದರ ಸಾಕಾಗುವುದಿಲ್ಲ ಎಂದು ಕೆಲ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ಬಗ್ಗೆ ಪ್ರಸ್ತಾವನೆ ಸರಕಾರದ ಮುಂದಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ದರ ಪರಿಷ್ಕರಣೆ ಬಗ್ಗೆ ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ರಕ್ತ ನಿಧಿ, ಕಿಡ್ನಿ ಕಸಿ ನೀತಿಯಲ್ಲಿ ಕೆಲ ಬದಲಾವಣೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸೇರಿದಂತೆ ಹಿರಿಯ ವೈದ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.