ಬಿಸಿಲ ಝಳಕ್ಕೆ ರಾಜ್ಯದ ಜನತೆ, ಕೂಲಿ ಕಾರ್ಮಿಕರು ಹೈರಾಣು

Update: 2024-04-04 14:46 GMT

ಸಾಂದರ್ಭಿಕ ಚಿತ್ರ (Credit: CNBC)

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಝಳಕ್ಕೆ ಕೂಲಿ ಕಾರ್ಮಿಕರು, ವಾಹನ ಸವಾರರು, ಸಾರ್ವಜನಿಕ ಪ್ರಯಾಣಿಕರು ಸೇರಿದಂತೆ ರಾಜ್ಯದ ಜನತೆ ಅಕ್ಷರಶಃ ಹೈರಾಣಾಗಿದ್ದು, ಬಿಸಿಗಾಳಿಯಿಂದ ತತ್ತರಿಸಿ ಹೋಗಿದ್ದಾರೆ.

ಪ್ರಸ್ತುತ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಎಪ್ರಿಲ್ ತಿಂಗಳಿನಿಂದ ಮೇ ತಿಂಗಳ ಅವಧಿಯಲ್ಲಿ ಬರುವ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದು ಭಾರತ ಹವಾಮಾನ ಇಲಾಖೆಯು ಸೂಚಿಸಿದೆ.

ಬೆಂಗಳೂರು ನಗರದಲ್ಲಿ ಮೂರು ದಿನಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಬಿಸಿಲು ನಗರದ ಜನರನ್ನು ಕಂಗೆಡಿಸಿದೆ. ಮಳೆಯ ಛಾಯೆಯೂ ಇಲ್ಲದೆ, ತಾಪಮಾನದಲ್ಲೂ ಏರಿಕೆಯಾಗಿ ಮನೆಯಿಂದ ಹೊರ ಬರಲು ಆತಂಕಪಡುವ ಸ್ಥಿತಿ ಇದೆ. ಕಳೆದ ಐದು ವರ್ಷಗಳಲ್ಲೇ ಈ ವರ್ಷ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಾರ ನಗರದಲ್ಲ್ಲಿ 34 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬುಧವಾರ(ಎ.3) ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಗುರುವಾರ(ಎ.4) 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಐದು ವರ್ಷದಲ್ಲಿ ಇದೇ ಮೊದಲ ಬಾರಿ ಇಷ್ಟು ಹೆಚ್ಚಿನ ಪ್ರಯಾಣದ ಉಷ್ಣಾಂಶ ದಾಖಲಾಗಿದ್ದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಾಪಮಾನದ ಮುನ್ಸೂಚನೆಯ ಹೆಚ್ಚಳವು ರಾಜ್ಯಾದ್ಯಂತ ಸಾಮಾನ್ಯ ಶಾಖದ ಅಲೆಗಳು 2 ರಿಂದ 14 ದಿನಗಳು ಮೀರುವ ಸಾಧ್ಯತೆಯಿದೆ. ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅತೀ ಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಕಂದಾಯ ಇಲಾಖೆಯು ಸಲಹೆ, ಸೂಚನೆಗಳನ್ನು ನೀಡಿದೆ.

ಅಲ್ಲದೆ, ಈಗಾಗಲೇ ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿರುವುದರಿಂದ, ಅತೀ ಹೆಚ್ಚು ತಾಪಮಾನದ(ಬಿಸಿ ಗಾಳಿ) ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಮತ್ತು ತಗ್ಗಿಸಲು ಸಲಹೆಗಳನ್ನು ನೀಡುವುದು ಅವಶ್ಯವಿರುತ್ತದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಅನಾರೋಗ್ಯ ತಡೆಗಟ್ಟಲು ಸೂಚನೆಗಳು: ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ (ಮಧ್ಯಾಹ್ನ 12 ರಿಂದ 3ಗಂಟೆಯ ವರೆಗೆ) ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಕಾಲಕಾಲಕ್ಕೆ, ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ(ಮಧ್ಯಾಹ್ನ 12 ರಿಂದ 3ಗಂಟೆಯ ವರೆಗೆ) ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಪ್ರಯಾಣ ಮಾಡುವಾಗ, ನೀರನ್ನು ಜೊತೆಯಲ್ಲಿ ಒಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು ಎಂದು ಸೂಚನೆ ನೀಡಲಾಗಿದೆ.

ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿಮಾಡಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‍ಎಸ್ ಅನ್ನು ಬಳಸಬೇಕು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು ಎಂದು ತಿಳಿಸಿದೆ.

ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ ಗಳು ಅಥವಾ ಸನ್‍ಶೇಡ್‍ಗಳನ್ನು ಬಳಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ ಅಥವಾ ಕ್ಯಾಪ್, ಹಡ್ನವರ್, ಹ್ಯಾಂಡ್ನವಲ್, ಹ್ಯಾಂಡ್ಯಾನ್, ಎಲೆಕ್ಟೋಲೈಟ್, ಗ್ಲೋಕೋಸ್, ಓಆರ್‍ಎಸ್ ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್‍ಅನ್ನು ಒಯ್ಯಬೇಕು ಎಂದು ಕಂದಾಯ ಇಲಾಖೆ ತಿಳಿಸಿದೆ.

ಆರೋಗ್ಯದ ಮೇಲಾಗುವ ಪರಿಣಾಮ: ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳತ, ಶಾಖದ ಬಳಲಿಕೆ ಮತ್ತು ಶಾಖದ ಅಘಾತದಂತಹ(ಸನ್ ಸ್ಟ್ರೋಕ್) ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆಯಾಸ, ದೌರ್ಭಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು ಕಂಡು ಬರುತ್ತದೆ. ದೇಹದ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞೆ ತಪ್ಪುವುದು ಕಂಡು ಬರುತ್ತದೆ.

ಪ್ರಥಮ ಚಿಕಿತ್ಸೆ: ಅತೀ ಹೆಚ್ಚು ತಾಪಮಾನಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸಬೇಕು. ತಂಪಾದ ಒದ್ದೆ ಬಟ್ಟೆಯನ್ನು ಹಾಕುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು.

ವ್ಯಕ್ತಿ ಇನ್ನೂ ಪ್ರಜ್ಞೆ ಹೊಂದಿದ್ದರೆ, ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್‍ಎಸ್, ನಿಂಬೆ ಪಾನಕ ನೀಡಬೇಕು. ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಮದ್ಯ ಪಾನ, ಕಾಫಿ, ಶೇಖರಿಸಿದ ಪಾನೀಯವನ್ನು ನೀಡಬಾರದು.

ತೆಗೆದುಕೊಳ್ಳಬೇಕಾದ ಕ್ರಮಗಳು: ನಗರ, ಪಟ್ಟಣ, ಕೊಳಚೆ ಪ್ರದೇಶಗಳು, ಅತೀ ಹೆಚ್ಚು ತಾಪಮಾನಕ್ಕೆ ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಬಸ್ ಟರ್ಮಿನಲ್‍ಗಳು ಮತ್ತು ಜನರು ಸೇರುವ ಇತರ ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ಸೌಲಭ್ಯ ಕಲ್ಪಿಸಬೇಕು.

ಪ್ರಾಣಿಗಳಲ್ಲಿ ಬಿಸಿಗಾಳಿಗೆ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ನಿಯಮಾನುಸಾರ ಸಂಬಂಧಿಸಿದ ಪಶು ವೈದ್ಯಕೀಯ ಔಷಧಗಳನ್ನು ಶೇಖರಣೆ ಮಾಡುವುದು. ವಾಹನ ಚಾಲಕರಿಗೆ ಅವಶ್ಯ ಕುಡಿಯುವ ನೀರನ್ನು ಒದಗಿಸುವುದು ಹಾಗೂ ರಾಜ್ಯದಲ್ಲಿ ಅತೀ ಹೆಚ್ಚು ತಾಪಮಾನದ ಪರಿಸ್ಥಿತಿಗಳ ಬಗ್ಗೆ ಪ್ರವಾಸಿಗರಿಗೆ ಸಲಹೆಗಳನ್ನು ಪ್ರಚಾರ ಮಾಡುವುದು.

ಧಾರ್ಮಿಕ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ತಾತ್ಕಾಲಿಕ ನೆರಳಿನ ಪ್ರದೇಶಗಳನ್ನು ನಿರ್ಮಿಸುವುದು. ಸಾಮೂಹಿಕ ಸಭೆಯ ಹೊರಾಂಗಣ ಸ್ಥಳಗಳಲ್ಲಿ ಜನರಿಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗೆ ಸಭೆ, ಸಮಾರಂಭಗಳನ್ನು ತಂಪಾದ ವಾತಾವರಣವಿರುವ ಅವಧಿಯಲ್ಲಿ(ಬೆಳಗ್ಗೆ ಅಥವಾ ಸಂಜೆ) ನಿಗದಿಪಡಿಸುವುದು.

ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮತ್ತು ಖಾಸಗಿ ಬೋರ್‍ವೆಲ್ ಗುರುತಿಸಿ ಅವುಗಳ ಮೂಲಕ ಕುಡಿಯುವ ನೀರಿನ ಕೊರತೆಯನ್ನು ಅಗತ್ಯತೆಗೆ ಅನುಗುಣವಾಗಿ ನೀಗಿಸಲು ಈಗಾಗಲೇ ಕ್ರಮ ವಹಿಸಲಾಗಿರುತ್ತದೆ. ಪರ್ಯಾಯ ಕಾರ್ಯತಂತ್ರವನ್ನು(ಕಾಂಟಿಂಜೆನ್ಸಿ ಯೋಜನೆ) ಈಗಾಗಲೆ ರೂಪಿಸಲಾಗಿದ್ದು, ಆಧ್ಯತೆ ಮೇಲೆ ಹಾಗೂ ಅಗತ್ಯತೆಗೆ ತಕ್ಕಂತೆ ಇದನ್ನು ಅನುಷ್ಠಾನ ಮಾಡುವುದು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮ ಅಥವಾ ಪಟ್ಟಣಕ್ಕೆ ಅಗತ್ಯವಿರುವಷ್ಟು ನೀರನ್ನು ನಿಯಮಾನುಸಾರ ಪೈಪ್ ಲೈನ್ ಮೂಲಕ ಪೂರೈಸುವುದು. ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಸಭೆಗಳನ್ನು ಪ್ರತಿವಾರ ನಡೆಸುತ್ತಿದ್ದು ಇದನ್ನು ಮುಂದುವರೆಸುವುದು.

ಬೆಂಕಿಯ ತಡಗಟ್ಟುವಿಕೆ: ಆಸ್ಪತ್ರೆಗಳು, ಕೈಗಾರಿಕೆಗಳು, ಜನಸಂದಣಿ ಸ್ಥಳಗಳು ಇತ್ಯಾದಿಗಳಲ್ಲಿ ಅಗ್ನಿ ಸುರಕ್ಷತೆಯ ವಿವಿಧ ಅಂಶಗಳ ಮೇಲೆ ಆಗಾಗ್ಗೆ ತಪಾಸಣೆ ಕೈಗೊಳ್ಳುವುದು. ಅಗ್ನಿ ಸುರಕ್ಷತೆಗೆ ತರಬೇತಿಗಳನ್ನು ಕೈಗೊಳ್ಳುವುದು. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್ ಕಡ್ಡಾಯವಾಗಿ ನಡೆಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News