ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ: ಸಂಚಾರ ಅಸ್ತವ್ಯಸ್ತ, ಸಾರ್ವಜನಿಕರ ಪರದಾಟ
ಬೆಂಗಳೂರು, ಜು.25: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆಯು ಮಂಗಳವಾರ ಮಧ್ಯಾಹ್ನದಿಂದ ತಡರಾತ್ರಿಯವರೆಗೆ ಭಾರೀ ಮಳೆ ಸುರಿದಿದೆ. ಇದರಿಂದ, ನಗರದ ವಾಹನ ಸಂಚಾರದಲ್ಲಿ ವ್ಯತ್ಯಯ, ಸಾರ್ವಜನಿಕರ ಓಡಾಟಕ್ಕೆ ಬಹಳಷ್ಟು ಸಮಸ್ಯೆ ಉಂಟು ಮಾಡಿದೆ.
ಹಲವು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತಿತ್ತು ಜತೆಗೆ ಬರೀ ಗಾಳಿ ಬೀಸುತ್ತಿತ್ತು. ಆದರೆ, ಮಂಗಳವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2ಗಂಟೆಯಿಂದ ರಾತ್ರಿಯವರೆಗೆ ಭಾರೀ ಮಳೆ ಸುರಿಯಿತು.
ಬೆಂಗಳೂರಿನ ಕೇಂದ್ರ ಭಾಗವಾದ ಮೆಜೆಸ್ಟಿಕ್, ಗಾಂಧಿನಗರ, ಶಿವಾಜಿನಗರ, ರಾಜಾಜಿನಗರ, ಮಲ್ಲೇಶ್ವರ, ಎಂಜಿ ರಸ್ತೆ, ಹೆಬ್ಬಾಳ, ಕೋರಮಂಗಲ, ಹಲಸೂರು, ಸಂಪಗಿರಾಮನಗರ, ಬಸಶಂಕರಿ, ಬಸವನಗುಡಿ, ಎಚ್‍ಎಸ್‍ಆರ್ ಲೇಔಟ್, ಬಿಟಿಎಂ, ಮಡಿವಾಳ, ಬೆಂಗಳೂರಿನ ಹೊರವಲಯವಾದ ಕೆಂಗೇರಿ ಉಪನಗರ, ಬಾಗಲಕುಂಟೆ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ.
ಸಂಚಾರ ಅಸ್ತವ್ಯಸ್ತ: ಸಂಜೆಯಾಗುತ್ತಿದ್ದಂತೆ ಕಚೇರಿ ಮುಗಿಸಿ ಮನೆಗೆ ಕಡೆ ಹೊರಟಿದ್ದ ಸಾಕಷ್ಟು ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಗರದ ಪ್ರಮುಖ ಅಂಡರ್ ಪಾಸ್‍ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಿ ವಾಹನ ಸಂಚಾರ ನಿಷೇಧಿಸಲಾಗಿತ್ತು.