ಭಾರೀ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ ಮೂವರು ಮೃತ್ಯು; 92 ಮನೆಗಳಿಗೆ ಸಂಪೂರ್ಣ ಹಾನಿ

Update: 2023-07-27 15:29 GMT

ಚಿತ್ರ- ಮಳೆಗೆ ಕುಸಿದಿರುವ ಮನೆಯ ಮೇಲ್ಛಾವಣಿ

ಚಿಕ್ಕಮಗಳೂರು, ಜು.27: ಕಾಫಿನಾಡಿನಲ್ಲಿ ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿದ್ದರೂ ಕಳೆದೊಂದು ತಿಂಗಳಲ್ಲಿ ಸುರಿದ ಮಳೆ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಭಾರೀ ಮಳೆಗೆ ಜಿಲ್ಲೆಯಲ್ಲಿ ಇದುವರೆಗೆ 97 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದರೇ, 3 ಮಂದಿ ಜೀವಕಳೆದುಕೊಂಡಿದ್ದಾರೆ. ಭಾರೀ ಮಳೆಗೆ ಜಿಲ್ಲಾದ್ಯಂತ 61.73 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದರೇ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ 5815 ಹೆಕ್ಟೇರ್ ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು, ಅತಿವೃಷ್ಟಿ ಪರಿಹಾರಕ್ಕಾಗಿ ರಾಜ್ಯ ಸರಕಾರ 6.33ಕೋಟಿ ರೂ. ಬಿಡುಗಡೆ ಮಾಡಿದೆ.

ಅತಿವೃಷ್ಟಿಗೆ ಸಂಬಂಧಿಸಿದಂತೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರೊಂದಿಗೆ ವೀಡಿಯೋ ಸಂವಾದ ನಡೆಸಿದ್ದು, ಜಿಲ್ಲಾಡಳಿತ ಜಿಲ್ಲೆಯಲ್ಲಿ ನಡೆದಿರುವ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದೆ. ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಒದಗಿಸಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಇದುವರೆಗೆ ಮಳೆಗೆ ಮೂವರು ಬಲಿಯಾಗಿದ್ದಾರೆ. ಜೂ.11ರಂದು ತರೀಕೆರೆ ತಾಲೂಕಿನ ಲಕ್ಕವಳಿ ಹೋಬಳಿಯ ಗಂಜಿಕೆರೆ ಗ್ರಾಮದ ಮುಕೇಶ್ ಸಿಡಿಲು ಬಡಿದು ಸಾವನ್ನಪ್ಪಿದ್ದರೆ, ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಅಂಬೇಡ್ಕರ್ ನಗರದ ದೇವಮ್ಮ ಜು.19ರಂದು ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಇಬ್ಬರು ಮೃತರಿಗೂ ಪರಿಹಾರ ಧನ ನೀಡಲಾಗಿದ್ದು, ಜು.25ರಂದು ಕಡೂರು ತಾಲೂಕಿನ ಹೊಸಸಿದ್ದರಹಳ್ಳಿಯ ರೇವಮ್ಮ ಹಳ್ಳದಲ್ಲಿ ಕೊಚ್ಚಿಹೋಗಿ ಮೃತ ಪಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪರಿಹಾರ ದೊರೆಯಲಿದೆ.

ಜಿಲ್ಲಾದ್ಯಂತ 97 ಮನೆಗಳಿಗೆ ಹಾನಿ: ಮಳೆಯಿಂದ ಜಿಲ್ಲೆಯಲ್ಲಿ 97 ಮನೆಗಳಿಗೆ ಸಂಪೂರ್ಣವಾಗಿ ಕುಸಿದು ಬಿದ್ದು ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 4, ಚಿಕ್ಕಮಗಳೂರು ತಾಲೂಕಿನಲ್ಲಿ 3, ಕೊಪ್ಪದಲ್ಲಿ 1 ಮನೆ ಸೇರಿದಂತೆ ಒಟ್ಟು 9 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಜಿಲ್ಲೆಯಲ್ಲಿ 26 ಸಣ್ಣಪುಟ್ಟ ಹಾನಿಯಾಗಿದ್ದು, ಚಿಕ್ಕಮಗಳೂರು ತಾಲೂಕಲಿನಲ್ಲಿ 5, ಮೂಡಿಗೆರೆ 3, ಕೊಪ್ಪ 2, ನ.ರಾ.ಪುರ 5, ಕಡೂರು 6, ತರೀಕೆರೆ 3, ಕಳಸದಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಜಿಲ್ಲಾದ್ಯಂತ 652 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ 12, ಮೂಡಿಗೆರೆ 9, ಶೃಂಗೇರಿ 8, ಕೊಪ್ಪ 9,. ನ.ರಾ.ಪುರ 8, ಕಡೂರು 6, ತರೀಕೆರೆ 2, ಅಜ್ಜಂಪುರ 3 ಮತ್ತು ಕಳಸ ತಾಲೂಕಿನಲ್ಲಿ 5 ಮನೆಗಳಿಗೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 183 ರೈತರು ಬೆಳೆದಿದ್ದ 61.73 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ಓರ್ವ ರೈತನ 0.59 ಹೆಕ್ಟೇರ್, ಕಡೂರಿನ 59 ರೈತರ 25.60 ಹೆಕ್ಟೇರ್, ಕೊಪ್ಪ ತಾಲೂಕಿನ 10 ಜನರ 3 ಹೆಕ್ಟೇರ್, ನ.ರಾ.ಪುರದ 25 ಜನರ 4.40 ಹೆಕ್ಟೇರ್ ಶೃಂಗೇರಿಯ 5 ರೈತರ 1.20 ಹೆಕ್ಟೇರ್, ತರೀಕೆರೆಯಲ್ಲಿ 51 ಜನರ 16.34 ಹೆಕ್ಟೇರ್, ಅಜ್ಜಂಪರದಲ್ಲಿ 31 ರೈತರುಗಳ 10.60 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ. ಕೃಷಿ ಇಲಾಖೆಯ 6600 ರೈತರ 5815 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಬೀಜಗಳಿಗೆ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಬಿತ್ತನೆ ಮಾಡಿದ್ದ ಬೆಳೆಗಳಿಗೆ ಹಾಳಾಗಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ 1351 ಹೆಕ್ಟೇರ್, ಕಡೂರಿನಲ್ಲಿ 1365, ತರೀಕೆರೆ ತಾಲೂಕಿಮನಲ್ಲಿ 1470 ಹೆಕ್ಟೇರ್ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ 80.21 ಕಿ.ಮೀ. ರಸ್ತೆ ಹಾಳಾಗಿದ್ದು, 36.92 ಕೋಟಿ ನಷ್ಟ ಉಂಟಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 53.20 ಕಿ.ಮೀ. 11.90 ಕೋಟಿ, ಮೂಡಿಗೆರೆಯಲ್ಲಿ 1 ಕಿ.ಮೀ.9.55ಕೋಟಿ, ಕೊಪ್ಪ 4.11 ಕಿ.ಮೀ. 5.27 ಕೋಟಿ, ಶೃಂಗೇರಿ 10.70 ಕಿ.ಮೀ 3.70 ಕೋಟಿ, ನರಸಿಂಹರಾಜಪುರದಲ್ಲಿ 0.70 ಕಿ.ಮೀ. 6 ಕೋಟಿ, ಕಡೂರಿನಲ್ಲಿ 10.50 ಕಿ.ಮೀ. 50 ಲಕ್ಷ ರೂ. ನಷ್ಟವಾಗಿದೆ. ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 10.15 ಕಿ.ಮೀ.ರಸ್ತೆ ಹಾಳಾಗಿದ್ದು, 2.21 ಕೋಟಿ, ಕೊಪ್ಪದಲ್ಲಿ 6.05 ಕಿ.ಮೀ.1.25 ಕೋಟಿ, ಮೂಡಿಗೆರೆಯಲ್ಲಿ 124.50 ಕಿ.ಮೀ. 9.95 ಕೋಟಿ, ನ.ರಾ.ಪುರದಲ್ಲಿ 5.10 ಕಿ.ಮೀ. 6.87 ಕೋಟಿ, ಶೃಂಗೇರಿಯಲ್ಲಿ 46 ಕಿ.ಮೀ. 3.63 ಕೋಟಿ ರೂ. ನಷ್ಟವಾಗಿದೆ. ತರೀಕೆರೆ ತಾಲೂಕಿನಲ್ಲಿ 51 ಕಂಬಧರೆಗುರುಳಿದ್ದು, 40 ಬದಲಾವಣೆಯಾಗಿವೆ. 7.95 ಲಕ್ಷ ನಷ್ಟ ಉಂಟಾಗಿದೆ. ಕಡೂರು ತಾಲೂಕಿನಲ್ಲಿ 85 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 80 ಕಂಬಗಳನ್ನು ಬದಲಾಯಿಸಲಾಗಿದೆ. 13.26 ಲಕ್ಷ ನಷ್ಟವಾಗಿದೆ. ಅಜ್ಜಂಪುರದಲ್ಲಿ 14 ಕಂಬಗಳಿಗೆ ಹಾನಿಯಾಗಿದ್ದು, ಅವೆಲ್ಲವನ್ನು ಬದಲಾಯಿಸಲಾಗಿದೆ. 2.18 ಲಕ್ಷ ನಷ್ಟವಾಗಿದೆ. ಕಳಸ ತಾಲೂಕಿನಲ್ಲಿ 99 ಕಂಬಗಳು ಉರುಳಿಬಿದ್ದಿದ್ದು, 75 ಕಂಬವನ್ನು ಬದಲಾಯಿಸಲಾಗಿದೆ. 15.44 ಲಕ್ಷ ನಷ್ಟವಾಗಿದೆ.

ಒಟ್ಟು 29.26 ಕಿ.ಮೀ. ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, 209.26 ಲಕ್ಷ ರೂ. ನಷ್ಟವಾಗಿದೆ. ಈ ಪೈಕಿ 26.08 ಕಿ.ಮೀ. ದುರಸ್ತಿಪಡಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 7.64 ಕಿ.ಮೀ., ಕೊಪ್ಪದಲ್ಲಿ 4.50, ಮೂಡಿಗೆರೆ 3.34 ಕಿ.ಮೀ., ಶೃಂಗೇರಿ 1.80 ಕಿ.ಮೀ., ನ.ರಾ.ಪುರ ತಾಲೂಕಿನಲ್ಲಿ 7, ತರೀಕೆರೆ 1.02, ಕಡೂರು 1.70, ಅಜ್ಜಂಪುರದಲ್ಲಿ 0.28, ಕಳಸದಲ್ಲಿ 1.98 ಕಿ.ಮೀ. ವಿದ್ಯುತ್ ಲೈನ್‍ಗೆ ಹಾನಿಯಾಗಿದೆ.

38 ಸೇತುವೆಗಳಿಗೆ ಹಾನಿ: ಲೋಕೋಪಯೋಗಿ ಇಲಾಖೆಗೆ ಸೇರಿದ 16 ಸೇತುವೆಗಳಿಗೆ ಹಾನಿಯಾಗಿ 7.80 ಕೋಟಿ ನಷ್ಟವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 5 ಸೇತುವೆಗಳಿಗೆಹಾನಿಯಾಗಿ 1.90 ಕೋಟಿ, ಮೂಡಿಗೆರೆ 4 ಸೇತುವೆ 2.60 ಕೋಟಿ, ಕೊಪ್ಪದಲ್ಲಿ 2ಕ್ಕೆ 1.10 ಕೋಟಿ, ನ.ರಾ.ಪುರದಲ್ಲಿ 4ಸೇತುವೆ 2.15 ಕೋಟಿ, ನಷ್ಟವಾದರೆ, 5 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿ 26 ಲಕ್ಷ ನಷ್ಟವಾಗಿದೆ. ಜಿಲ್ಲಾಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಲ್ಲಿ 22 ಸೇತುವೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 1 ಸೇತುವೆ. 1ಕೋಟಿ, ಮೂಡಿಗೆರೆ 1 ಸೇತುವೆ 90 ಲಕ್ಷ, ನ.ರಾ.ಪುರದಲ್ಲಿ 14ಕಲ್ಕಲೆ 4.87 ಕೋಟಿ, ಶೃಂಗೇರಿಯಲ್ಲಿ 6 ಸೇತುವೆಗಳಿಗೆ ಧಕ್ಕೆಯಾಗಿ 2.20 ಕೋಟಿ, ನಷ್ಟ ಉಂಟಾಗಿದೆ. ಇದು ಜೂನ್ 1ರಿಂದ ಜುಲೈ 26ರವರೆಗೆ ಆಗಿರುವ ನಷ್ಟವಾಗಿದೆ.

1463 ವಿದ್ಯುತ್‍ಕಂಬಗಳಿಗೆ ಹಾನಿ: ಜಿಲ್ಲೆಯಲ್ಲಿ ಜೂ.1ರಿಂದ ಜು.25ರವರೆಗೆ ಒಟ್ಟು 1463 ವಿದ್ಯುತ್‍ಕಂಬಗಳು ಧರೆಗುರುಳಿದ್ದು, 2.28ಕೋಟಿ ರೂ. ನಷ್ಟವಾಗಿದೆ. 1304 ಕಂಬಗಳನ್ನು ಬದಲಾಯಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 382 ಕಂಬಗಳು ಉರುಳಿಬಿದ್ದಿದ್ದು, 3349ನ್ನು ಬದಲಾಯಿಸಲಾಗಿದೆ. 59.57 ಲಕ್ಷ ನಷ್ಟ ಸಂಭವಿಸಿದೆ. ಕೊಪ್ಪ 225 ಕಂಬಗಳಿಗೆಹಾನಿಯಾಗಿ 159ನ್ನು ಬದಲಾಯಿಸಿದ್ದು, 35.09 ಲಕ್ಷ ನಷ್ಟವಾಗಿದೆ. ಮೂಡಿಗೆರೆಯಲ್ಲಿ 169 ಕಂಬಗಳು ಧರೆಗೆ ಉರುಳಿದರೆ 159ನ್ನು ಬದಲಾಯಿಸಲಾಗಿದೆ. 26 ಲಕ್ಷ ರೂ. ನಷ್ಟವಾಗಿದೆ. ಶೃಂಗೇರಿ ತಾಲೂಕಿನಲ್ಲಿ 90 ಕಂಬಕ್ಕೆ ಹಾನಿಯಾಗಿದ್ದು, 84ನ್ನು ಬದಲಾಯಿಸಲಾಗಿದೆ. 14 ಲಕ್ಷ ನಷ್ಟ ಸಂಭವಿಸಿದೆ. ನ.ರಾ.ಪುರದಲ್ಲಿ 350 ಕಂಬ ಉರುಳಿಬಿದಿದ್ದರೆ, 344ನ್ನು ಬದಲಾಯಿಸಲಾಗಿದೆ. 54 ಲಕ್ಷ ರೂ. ನಷ್ಟ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News