ಇನ್ನು ಮುಂದೆ ಜೆಡಿಎಸ್‍ನಲ್ಲಿ ‘S’ ಅನ್ನು ತೆಗೆಯಬೇಕು: ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ಬೆಂಗಳೂರು, ಸೆ.12: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾವುದೇ ಸಿದ್ದಾಂತವಿಲ್ಲ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಹೈಜಾಕ್ ಮಾಡಿ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಜೆಡಿಎಸ್‍ನಲ್ಲಿ ‘ಎಸ್’ ಅನ್ನು ತೆಗೆಯಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನತಾದಳ ಪಕ್ಷಕ್ಕೆ ಬದ್ದತೆಯೇ ಇಲ್ಲದಂತಾಗಿದೆ. ಹಿರಿಯರಾದ ದೇವೆಗೌಡರಿಗೆ ಬದ್ದತೆ ಇದ್ದರೂ, ಕುಮಾರಸ್ವಾಮಿ ಅಧಿಕಾರದ ಆಸೆಗೆ ತಮ್ಮ ಪಕ್ಷದ ತತ್ವ ಸಿದ್ದಾಂತವನ್ನೇ ಕಿತ್ತೆಸಿದಿದ್ದಾರೆ ಎಂದರು.
ಜನತಾಪಕ್ಷದಿಂದ ಬಿಜೆಪಿಯವರು ಹೊರ ಬರಲು ಕಾರಣ ದ್ವಿಸದಸ್ಯತ್ವ. ಅಂದರೆ ಅವರುಗಳು ಆರೆಸ್ಸೆಸ್ ಹಾಗೂ ಜನತಾ ಪಕ್ಷ ಎರಡೂ ಕಡೆ ಸದಸ್ಯತ್ವ ಹೊಂದಿದ್ದರು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಅದಕ್ಕೆ ಪಕ್ಷ ತೊರೆದು ಬೇರೆ ಪಕ್ಷ ಮಾಡಿಕೊಂಡರು. ಈಗ ಮತ್ತೊಮ್ಮೆ ಬಿಜೆಪಿ, ಜೆಡಿಎಸ್ ಒಂದಾಗುತ್ತಿದ್ದು, ಇದೆಲ್ಲವೂ ಹೆಚ್ಚು ದಿನ ಉಳಿಯುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಎರಡೂ ಒಡೆದ ಮನೆಗಳು. ಇಬ್ಬರೂ ಸೇರಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಗೆಲ್ಲದೇ ಇದ್ದ ಪಕ್ಷದಲ್ಲಿ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತೀರಾ, 2019ರಲ್ಲಿ ಪುಲ್ವಾಮಾ ಘಟನೆಯ ಬಗ್ಗೆ ಸುಳ್ಳು ಹೇಳಿಕೊಂಡು ಲೋಕಸಭಾ ಚುನಾವಣೆ ಗೆದ್ದರೆ ಹೊರತು ಬೇರೆ ಸಾಧನೆ ಇಲ್ಲ ಎಂದು ಆರೋಪಿಸಿದರು.
2024ರ ಲೋಕಸಭಾ ಚುನಾವಣೆ ಇನ್ನೂ 8 ತಿಂಗಳು ದೂರವಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಹತಾಶೆಯ ಹಂತಕ್ಕೆ ತಲುಪಿವೆ. ಚುನಾವಣೆ ಮುಗಿದು ಇನ್ನೂ ಕೇವಲ 4 ತಿಂಗಳುಗಳು ಮಾತ್ರ ಆಗಿರುವುದು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವಿಲ್ಲ, ಗುಂಪುಗಾರಿಕೆ ಹೆಚ್ಚಾಗಿರುವ ಕಾರಣ ಬಿಜೆಪಿಯಲ್ಲಿ ಯಾರು ನಾಯಕರು ಎನ್ನುವ ಗೊಂದಲವಿದೆ. ವಿಧಾನಪರಿಷತ್‍ನಲ್ಲಿ ವಿರೋಧ ಪಕ್ಷದ ನಾಯಕನಿಲ್ಲ, ಮುಖ್ಯ ಸಚೇತಕರು ಇಲ್ಲ ಎಂದು ಟೀಕಿಸಿದರು.