ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರ | ಚರ-ಸ್ಥಿರ ಆಸ್ತಿಗಳ ಯಾವುದೇ ಬದಲಾವಣೆ ಮಾಡದಂತೆ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು : ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಚರ ಮತ್ತು ಸ್ಥಿರ ಆಸ್ತಿಗಳನ್ನು ಸದ್ಯ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಬಾರದು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಿಂಧುತ್ವ ಪ್ರಶ್ನಿಸಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ವಾದ ಮಂಡಿಸಿ, ಅರ್ಜಿದಾರರ ಪರ ವಕೀಲರು ಸಂಬಂಧಪಡದ ವಿಷಯಗಳನ್ನು ಉಲ್ಲೇಖ ಮಾಡುತ್ತಿದ್ದಾರೆ. ಕಾಯ್ದೆ, ಪ್ರಾಧಿಕಾರದ ಸಿಂಧುತ್ವ ಬೇಕಿದ್ದರೆ ಅರ್ಜಿದಾರರು ಪ್ರಶ್ನಿಸಲಿ. ಆದರೆ, ವಿಧಾನ ಮಂಡಲದ ಪ್ರಕ್ರಿಯೆಯನ್ನು ಪ್ರಶ್ನಿಸುವಂತಿಲ್ಲ. ಅರ್ಜಿದಾರರ ವಾದಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು ಎಂದು ಕೋರಿದರು.
ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿತು. ಅಲ್ಲಿವರೆಗೆ ದೇವಸ್ಥಾನದ ಚರ ಮತ್ತು ಸ್ಥಿರ ಆಸ್ತಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ಸರಕಾರಕ್ಕೆ ನಿರ್ದೇಶನ ನೀಡಿದೆ.