HSRP ನಂಬರ್‌ ಪ್ಲೇಟ್ ಅಳವಡಿಕೆ ಗಡುವನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ

Update: 2024-06-12 13:56 GMT

ಬೆಂಗಳೂರು : ರಾಜ್ಯದಲ್ಲಿ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸಲು ಆಗಸ್ಟ್‌ ಅಥವಾ ಸೆಪ್ಟೆಂಬರ್‌ವರೆಗೆ ಗಡುವು ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಅನುಮತಿ ನೀಡಿದೆ.

HSRP ಅಳವಡಿಕೆಗೆ ವಿಧಿಸಲಾಗಿರುವ ಗಡುವು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಬುಧವಾರ ನಡೆಸಿತು.

“ಹೈಕೋರ್ಟ್‌ನ ರಜಾಕಾಲೀನ ಪೀಠವು ಮೇ 21ರಂದು HSRP ಅಳವಡಿಸದಿರುವುದಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಈಗ ರಾಜ್ಯ ಸರ್ಕಾರವು ಆಗಸ್ಟ್‌-ಸೆಪ್ಟೆಂಬರ್‌ವರೆಗೆ HSRP ಅಳವಡಿಕೆ ಗಡುವು ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಹೀಗಾಗಿ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಹೈಕೋರ್ಟ್ ಅರ್ಜಿದಾರರ ವಿರುದ್ಧ ಕ್ರಮಕೈಗೊಳ್ಳದಂತೆ ಮಾಡಿರುವ ಆದೇಶವು ಇಂದಿಗೆ ಮುಕ್ತಾಯವಾಗಲಿದೆ” ಎಂದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು “ಸರ್ಕಾರವು HSRP ಅಳವಡಿಕೆಗೆ ವಿಧಿಸಿರುವ ಗಡುವನ್ನು ಆಗಸ್ಟ್‌ ಅಥವಾ ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ನಿರ್ಧರಿಸಿದೆ. ಆದರೆ, ರಜಾಕಾಲೀನ ಪೀಠವು ಮೇ 21ರಂದು ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದೆ. ಹೀಗಾಗಿ, ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಬೇಕು. ಪೀಠ ಅನುಮತಿಸಿದರೆ ಒಂದು ವಾರದಲ್ಲಿ ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗುವುದು” ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.

ಕೃಪೆ: kannada.barandbench.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News