ಹೈಕೋರ್ಟ್ ಕಟ್ಟಡ ವಿಸ್ತರಣೆ: 4 ವಾರ ಕಾಲಾವಕಾಶ ಕಲ್ಪಿಸಿದ ನ್ಯಾಯಾಲಯ
ಬೆಂಗಳೂರು, ಅ.31: ಹೈಕೋರ್ಟ್ ಕಟ್ಟಡ ವಿಸ್ತರಣೆಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರಕಾರ ಸಲ್ಲಿಸಿರುವ ಮೂರು ಪ್ರಸ್ತಾವನೆಗಳ ಕುರಿತು ಹೈಕೋರ್ಟ್ ಕಟ್ಟಡದ ಸಮಿತಿಯ ಅಭಿಪ್ರಾಯ ತಿಳಿಸಲು ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ ನಾಲ್ಕು ವಾರ ಕಾಲಾವಕಾಶ ಕಲ್ಪಿಸಿದೆ.
ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್.ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ 30ಕ್ಕೂ ಅಧಿಕ ಎಕರೆ ಜಮೀನು ಮಂಜೂರು ಮಾಡಲು ಸರಕಾರಕ್ಕೆ ನಿರ್ದೇಶಿಸಬೇಕು ಕೋರಿ ಶರಣ ದೇಸಾಯಿ ಎಂಬುವವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಹೈಕೋರ್ಟ್ ಆಡಳಿತ ವಿಭಾಗದ ಪರ ಹಾಜರಾದ ಹಿರಿಯ ವಕೀಲ ಎಸ್.ಎಸ್.ನಾಗಾನಂದ್ ಅವರು, ಹೈಕೋರ್ಟ್ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುವ ಸಂಬಂಧ ಸರಕಾರ ಸಲ್ಲಿಸಿರುವ ಪ್ರಸ್ತಾವನೆಗಳು ಹೈಕೋರ್ಟ್ ಕಟ್ಟಡ ಸಮಿತಿಯ ಪರಿಶೀಲನೆಯಲ್ಲಿದೆ. ಸಮಿತಿಯಲ್ಲಿ ಕೆಲವೊಂದು ಬದಲಾವಣೆಗಳು ನಡೆದಿದೆ. ಇದರಿಂದ ಸರಕಾರದ ಪ್ರಸ್ತಾವನೆಗಳ ಮೇಲೆ ಸಮಿತಿಯ ಅಭಿಪ್ರಾಯ ತಿಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ವಿಭಾಗೀಯ ಪೀಠ ನಾಲ್ಕು ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.