ಹಂಪಿ ದೇವಾಲಯ ಬಳಿಯ ಭೂಸ್ವಾಧೀನ ರದ್ದುಪಡಿಸಿದ ಹೈಕೋರ್ಟ್

Update: 2023-11-04 13:16 GMT

ಬೆಂಗಳೂರು, ನ.4: ಹಂಪಿಯಲ್ಲಿರುವ ಉಗ್ರ ನರಸಿಂಹ ಮತ್ತು ಬಡವಿಲಿಂಗ ದೇವಾಲಯಗಳ ಸಂರಕ್ಷಿತ ಸ್ಮಾರಕಗಳ ಬಳಿ ಮೂಲಸೌಕರ್ಯ ಸುಧಾರಣೆಗಾಗಿ ರೈತರ ಸುಮಾರು 7 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಹೊಸಪೇಟೆ ತಾಲೂಕಿನ ಕೃಷ್ಣಾಪುರ ಮತ್ತು ಕಮಲಾಪುರಗಳ ವಿವಿಧ ಸರ್ವೆ ನಂಬರ್‍ಗಳಲ್ಲಿ ಸರಕಾರವು ಭೂಮಿ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ 2007ರಲ್ಲಿ ನಿಡಶೇಷಿ ವೀರಣ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿರುವ ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಭೂ ಸ್ವಾಧೀನ ಮಾಡಿಕೊಂಡು 2006ರ ಎ.5ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

ಸರಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿ ಬಡ ರೈತರ ಜೀವನಾಡಿಯಾಗಿದೆ. ಈ ಪ್ರಕರಣದಲ್ಲಿ ಭೂಸ್ವಾಧೀನಕ್ಕೆ ಯಾವುದೇ ನೈತಿಕ ಕಾರಣಗಳು ಕಂಡು ಬರುತ್ತಿಲ್ಲ. ರಾಷ್ಟ್ರೀಯ ಸ್ಮಾರಕಗಳ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿರುವುದರಿಂದ ಅರ್ಜಿದಾರರು ತಮ್ಮ ಆಕ್ಷೇಪಣೆ ಸಲ್ಲಿಸುವ ಮೂಲಕ ವಿಚಾರಣೆಗೆ ಅರ್ಹರಾಗಿರುತ್ತಾರೆ. ಅದಕ್ಕಾಗಿ ತುರ್ತು ಷರತ್ತು ವಿಧಿಸಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಭೂ ಸ್ವಾಧೀನ ಕಾಯಿದೆ-1894ರ ಸೆಕ್ಷನ್ 5 ‘ವಿಧಿ' ಅನ್ವಯ ಆಕ್ಷೇಪಣೆಗಳ ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅದನ್ನು ರದ್ದುಪಡಿಸಿ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ತುರ್ತು ನಿಬಂಧನೆ ಅನ್ವಯಿಸುವ ಮೂಲಕ ಭೂಮಿ ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರಕಾರದ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ‘ಭೂ ಸ್ವಾಧೀನ ಕಾನೂನುಬಾಹಿರ,’ ಎಂದು ಸಾರಿದೆ.

ತುರ್ತು ಷರತ್ತುಗಳಂತಹ ಕಾನೂನು ವ್ಯಾಪ್ತಿ ವಿಧಿಸುವಾಗ ಅಧಿಕಾರಿಗಳು ಕಾನೂನಿನ ಇತರೆ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಬದ್ಧವಾಗಿರಬೇಕು. ಪ್ರಸ್ತುತ ಪ್ರಕರಣದಲ್ಲಿ, ತುರ್ತು ಷರತ್ತನ್ನು ಅನ್ವಯ ಮಾಡಿರುವುದಕ್ಕೆ ರಾಜ್ಯ ಸರಕಾರದ ಬಳಿ ಸಾಬೀತು ಮಾಡುವ ಯಾವುದೇ ಅಂಶಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರಕಾರದ ಪುರಾತತ್ವ ಇಲಾಖೆಯು ಶಿಲ್ಪಗಳು ಮತ್ತು ಕೆತ್ತನೆಗಳ ಅಸ್ತಿತ್ವ ಪರಿಶೀಲಿಸಲು ಮತ್ತು ಈ ಸ್ಮಾರಕಗಳ ಸುತ್ತಲೂ ಮೂಲಸೌಕರ್ಯ ಸುಧಾರಣೆಗೆ ಈ ಭೂಮಿ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿತ್ತು. ಆದರೆ, ರಾಜ್ಯ ಸರಕಾರ ಸ್ಮಾರಕಗಳಿಗೆ ಪ್ರವೇಶ ಒದಗಿಸಲು ಭೂ ಸ್ವಾಧೀನ ಅಗತ್ಯವಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News