ಶಾಸಕ ರಿಝ್ವಾನ್ ಅರ್ಷದ್ ವಿರುದ್ಧದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

Update: 2024-03-26 09:09 GMT

ಬೆಂಗಳೂರು: ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ವಿರುದ್ಧದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಶಾಸಕರಾಗಿ ರಿಝ್ವಾನ್​ ಅರ್ಷದ್​ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್​​ಗೆ ಸಂಪಂಗಿ ರಾಮನಗರದ ಬಿ.ಲಕ್ಷ್ಮಿದೇವಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ​ಚುನಾವಣಾ ಅಕ್ರಮಕ್ಕೆ ಪೂರಕ ಸಾಕ್ಷ್ಯ ನೀಡಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಸಿ, ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿದೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್​ 123 (1) ಪ್ರಕಾರ ಮತ್ತು ಸೆಕ್ಷನ್​​ 123 (2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್​ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದು ಅಪರಾಧವಾಗಿದೆ. ಹೀಗಾಗಿ ಅಸಿಂಧುಗೊಳಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ರಿಝ್ವಾನ್​ ಅರ್ಷದ್​ ಪರ ವಕೀಲರು, ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿಯ ಅಕ್ರಮವೆಂದು ಪರಿಗಣಿಸಬಾರದು ಮತ್ತು ಚುನಾವಣಾ ಅಕ್ರಮಕ್ಕೆ ಸಾಕ್ಷ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕೆಂದು ರಿಝ್ವಾನ್ ಅರ್ಷದ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಕೋರಿದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಬಿ.ಲಕ್ಷ್ಮೀದೇವಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News