ವಿವಾಹ ನೋಂದಣಿ ಪತ್ರ ನಕಲಿ ಎಂದು ವಾದಿಸಿದ ಪತಿಗೆ ದಂಡ ವಿಧಿಸಿದ ಹೈಕೋರ್ಟ್

Update: 2023-07-14 14:17 GMT

ಬೆಂಗಳೂರು, ಜು.14: ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಪತ್ನಿಗೆ ನಿರ್ವಹಣಾ ವೆಚ್ಚ ನೀಡುವುದರಿಂದ ತಪ್ಪಿಸಿಕೊಳ್ಳಲು ವಿವಾಹ ನೋಂದಣಿ ಪ್ರಮಾಣ ಪತ್ರ ನಕಲಿ ಎಂದು ವಾದ ಮಂಡಿಸಿದ್ದ ವ್ಯಕ್ತಿಗೆ ಹೈಕೋರ್ಟ್, 25ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಸ್.ಎನ್.ದೊಡ್ಡಮನೆ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಹೈಕೋರ್ಟ್ ಆದೇಶದ 30 ದಿನಗಳಲ್ಲಿ 25 ಸಾವಿರ ರೂ.ದಂಡದ ಮೊತ್ತ ಪಾವತಿಸದಿದ್ದಲ್ಲಿ ಪ್ರತಿದಿನಕ್ಕೆ 200 ರೂ.ಮತ್ತು ಮುಂದಿನ 30 ದಿನಗಳಲ್ಲಿಯೂ ದಂಡ ಪಾವತಿಸಲು ವಿಫಲವಾದಲ್ಲಿ ದಿನವೊಂದಕ್ಕೆ 500 ರೂ.ಗಳಂತೆ ಹೆಚ್ಚುವರಿ ಮೊತ್ತ ಪಾವತಿಸಬೇಕು ಎಂದು ನಿರ್ದೇಶನ ನೀಡಿದೆ.

ಅಲ್ಲದೇ, ಒಮ್ಮೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಮತ್ತೆ ವಿವಾಹ ನೋಂದಣಿ ಪ್ರಮಾಣ ಪತ್ರ ನಕಲಿ ಎಂದು ಹೇಳಲಾಗದು. ಈ ಪ್ರಕರಣದಲ್ಲಿ ಅರ್ಜಿದಾರರು ಸತ್ಯವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ, ಸಾಕ್ಷ್ಯ ಅಧಿನಿಯಮ ಸೆಕ್ಷನ್ 58ರ ಪ್ರಕಾರ ವಿವಾಹವಾಗಿಲ್ಲ ಎಂಬುದಾಗಿ ಘೋಷಣೆ ಮಾಡಲಾಗದು. ಅರ್ಜಿದಾರರ ಈ ನಡವಳಿಕೆ ದೋಷಪೂರಿತವಾಗಿದ್ದು, ದಂಡ ವಿಧಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 1998 ರ ಡಿಸೆಂಬರ್ 3 ರ ವಿವಾಹ ನೋಂದಣಿ ಪ್ರಮಾಣ ಪತ್ರ ನಕಲಿ ದಾಖಲೆಯಾಗಿದೆ. ಅರ್ಜಿದಾರರು ಮತ್ತು ಪ್ರತಿವಾದಿ (ಪತಿ-ಪತ್ನಿ)ಯ ನಡುವಿನ ವೈವಾಹಿಕ ಸಂಬಂಧ ಕಾನೂನು ಬದ್ಧವಲ್ಲ. ಹೀಗಾಗಿ, ಪತ್ನಿಗೆ ಜೀವನ ನಿರ್ವಹಣಾ ವೆಚ್ಚ ನೀಡುವ ಆದೇಶವನ್ನು ವಿಚಾರಣಾ ನ್ಯಾಯಾಲಯ ರದ್ದುಪಡಿಸಬೇಕು ಎಂದು ಕೋರಿದ್ದರು.

ಪ್ರತಿವಾದಿಯಾಗಿರುವ ಪತ್ನಿಯ ಪರ ವಕೀಲರು, ಅರ್ಜಿದಾರ ಪತಿ ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಜಾಗೊಂಡಿದೆ. ಅದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿಲ್ಲ. ನಿರ್ವಹಣಾ ವೆಚ್ಚವನ್ನು ನೀಡುವಂತೆ ಸೂಚನೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾತ್ರ ಪ್ರಶ್ನಿಸಿದ್ದಾರೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News