ಸಿವಿಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಕುರಿತು ಹೈಕೋರ್ಟ್ ಮಾರ್ಗಸೂಚಿ
ಬೆಂಗಳೂರು, ಜು.24: ಸಿವಿಲ್ ಕೇಸ್‍ಗಳಲ್ಲಿ ಸಿವಿಲ್ ನ್ಯಾಯಾಲಯದ ಆದೇಶಗಳಿಗೆ ಉದ್ದೇಶ ಪೂರ್ವಕವಾಗಿ ಅಸಹಕಾರ ತೋರಿದರೆ, ಎಂತಹ ಸನ್ನಿವೇಶಗಳಲ್ಲಿ ಜೈಲು ಶಿಕ್ಷೆ ವಿಧಿಸಬಹುದು ಎಂಬುದರ ಬಗ್ಗೆ ಹೈಕೋರ್ಟ್, ಮಾರ್ಗಸೂಚಿಗಳನ್ನು ನೀಡಿದೆ.
ತಾವು ನೀಡಿದ ಆದೇಶಕ್ಕೆ ಉದ್ದೇಶಪೂರ್ವಕವಾಗಿ ಅಸಹಕಾರ ತೋರಿದಾಗ ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ XXXIX, ನಿಯಮ 2ಎ ಅಡಿ ಸಿವಿಲ್ ನ್ಯಾಯಾಲಯಗಳು ಪ್ರತಿವಾದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಸಿವಿಲ್ ಜೈಲು ಶಿಕ್ಷೆ ವಿಧಿಸಬಹುದು ಇಲ್ಲವೇ ಎರಡೂ ಶಿಕ್ಷೆಗಳನ್ನು ಒಟ್ಟಿಗೇ ನೀಡಬಹುದು ಎಂದು ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.
ಸಿವಿಲ್ ನ್ಯಾಯಾಲಯ ಸಿವಿಲ್ ಜೈಲು ಶಿಕ್ಷೆಗೆ ಆದೇಶಿಸಿದ್ದಾಗ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಅದನ್ನು ಮಾರಾಟ ಮಾಡುವ ಆದೇಶ ವಿಧಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸಿವಿಲ್ ಜೈಲು ಶಿಕ್ಷೆಗೆ ಆದೇಶಿಸುವಾಗ, ನ್ಯಾಯಾಲಯ ಸಂವಿಧಾನದ 21ನೆ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದರೂ, ಸಿವಿಲ್ ಜೈಲು ಶಿಕ್ಷೆ ತಳ್ಳಿಹಾಕಬೇಕು ಎಂದು ಇದರ ಅರ್ಥವಲ್ಲ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಮಾರಾಟ ಮಾಡುವ ಆಯ್ಕೆಯನ್ನು ಪೂರ್ಣಗೊಳಿಸಿದ ನಂತರವೇ ಈ ಆದೇಶ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.
ಮಣಿಪಾಲ್ ಸಮೂಹದ ಎರಡು ಘಟಕಗಳು ಹೂಡಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.