ಸಿದ್ದರಾಮಯ್ಯ ವಿರುದ್ಧ ಆರೋಪ: ಶಾಸಕ ಹರೀಶ್ ಪೂಂಜಾ ಹೇಳಿಕೆಯ ವಿಡಿಯೋ ಸೀಡಿ ಒದಗಿಸಲು ಹೈಕೋರ್ಟ್ ಮೌಖಿಕ ಸೂಚನೆ

Update: 2023-11-18 14:06 GMT

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ 24 ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ’ ಎಂಬುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಯ ವಿಡಿಯೋ ಸೀಡಿಯನ್ನು ಒದಗಿಸುವಂತೆ ಪ್ರಕರಣದ ದೂರುದಾರರಾದ ನಮಿತಾ ಕೆ.ಪೂಜಾರಿ ಅವರಿಗೆ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.

ನನ್ನ ವಿರುದ್ಧ ಬೆಳ್ತಂಗಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ನೀಡಿದ ಹೇಳಿಕೆಯಿಂದ ಯಾವುದೇ ಹಿಂಸಾಚಾರ, ಶಾಂತಿಭಂಗ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆಯಾದ ಪ್ರಕರಣ ನಡೆದಿಲ್ಲ. ಇದು ರಾಜಕೀಯ ಪ್ರೇರಿತ, ದುರುದ್ದೇಶ ಮತ್ತು ದ್ವೇಷಭಾವನೆಯಿಂದ ದಾಖಲಿಸಿರುವ ದೂರು. ಪೊಲೀಸರು ಆಡಳಿತ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಎಫ್‍ಐಆರ್ ದಾಖಲಿಸಿದ್ದಾರೆ. ಇದು ಕಾನೂನು ಬಾಹಿತ ಮತ್ತು ಸಂವಿಧಾನದ 14 ಮತ್ತು 21ನೆ ವಿಧಿಯ ಅಡಿಯಲ್ಲಿ ಕೊಡಲಾದ ಮೂಲ ಹಕ್ಕುಗಳ ಉಲ್ಲಂಘನೆ. ಹೀಗಾಗಿ, ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ದೂರುದಾರೆ ಪರ ವಕೀಲ ಬಿ.ಲತೀಫ್ ಅವರು, ಅರ್ಜಿದಾರರು ನೀಡಿರುವ ಹೇಳಿಕೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಿದೆ. ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಯ ವಿಡಿಯೋ ಸೀಡಿ ತಮ್ಮ ಬಳಿ ಇದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಮಯಾವಕಾಶ ನೀಡಬೇಕು ಎಂದು ಪೀಠಕ್ಕೆ ಕೋರಿದರು. ಆ ಮನವಿಗೆ ಒಪ್ಪಿದ ಪೀಠವು ಸಿಡಿ ಒದಗಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿ.8ಕ್ಕೆ ಮುಂದೂಡಿತು.

ಪ್ರಕರಣವೇನು?: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನ ಜೈನ್ ಪಟೇಲ್ ಸಭಾಂಗಣದಲ್ಲಿ 2023ರ ಮೇ 22ರಂದು ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಹರೀಶ್ ಪೂಂಜಾ ಕೋಮು ಪ್ರಚೋದಕ ಮತ್ತು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಮಿತಾ ಕೆ.ಪೂಜಾರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆ ಐಪಿಸಿ 153, 153 (ಎ) 505 ಮತ್ತು 505 (ಎ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News