ʼಹಿಟ್ ಆ್ಯಂಡ್ ರನ್ʼ ಪ್ರಕರಣ: ಹೊಸ ತಿದ್ದುಪಡಿ ವಿರೋಧಿಸಿ ಜ.17ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ

Update: 2024-01-11 13:21 GMT

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ.ದಂಡ ವಿಧಿಸುವ ಕೇಂದ್ರ ಸರಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ಜ.17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ದಕ್ಷಿಣ ಭಾರತದ ಲಾರಿ ಮಾಲೀಕರ ಒಕ್ಕೂಟ ತಿಳಿಸಿದೆ.

ಗುರುವಾರ ನಗರದ ದಿ ಬೆಂಗಳೂರು ಸಿಟಿ ಇನ್ಸ್‍ಸ್ಟಿಟ್ಯೂಷನ್‍ನ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ನವೀನ್ ರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು, ಹಿಟ್ ಅಂಡ್ ರನ್ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ಧವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ನಿರ್ಲಕ್ಷ್ಯ ಚಾಲನೆಗೆ ಇರುವ ನಿಯಮಗಳನ್ನು ಜಾರಿಗೆ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಷ್ಟ್ರಪತಿ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಹೀಗಾಗಿ ಸರಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಯಾವುದಾದರೂ ಅಪಘಾತವಾದರೆ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿನ ಚಕ್ರಕ್ಕೆ ಬೈಕ್ ಸಿಕ್ಕರೆ ಕೂಡಲೇ ಭಾರಿ ವಾಹನ ನಿಲ್ಲಿಸುವುದು ಸುಲಭವಿಲ್ಲ. ಒಂದು ವೇಳೆ ಲಾರಿ ನಿಲ್ಲಿಸಿ ಬಂದರೆ ಅಲ್ಲಿರುವ ಜನರು ಚಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ಆತ್ಮರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗುತ್ತಾರೆ. ಆದರೆ ಇಂತಹ ಘಟನೆಗಳಲ್ಲಿ ಹಿಟ್ ಅಂಡ್ ರನ್ ಪ್ರಕರಣ ಎಂದು ದಾಖಲು ಮಾಡುವುದು ಎಷ್ಟು ಸರಿ ಎಂದು ನವೀನ್ ರೆಡ್ಡಿ ಪ್ರಶ್ನಿಸಿದರು.

ನಮ್ಮ ಅಸೋಸಿಯೇಷನ್‍ನಲ್ಲಿ ಸುಮಾರು 6 ಲಕ್ಷ ಮಾಲೀಕರಿದ್ದಾರೆ. ರಾಜ್ಯದಲ್ಲಿ ಸುಮಾರು 15 ಲಕ್ಷ ಲಾರಿ ಚಾಲಕರಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಲಾರಿ ಮುಷ್ಕರ ನಡೆಯುತ್ತಿದೆ. ಪರಿಣಾಮವಾಗಿ ಕೆಲವೆಡೆ ಇಂಧನ ಕೊರತೆ ಭೀತಿ ಎದುರಾಗಿತ್ತು. ಹೊಸ ನಿಯಮದಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗಬಹುದು ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್ ಹೇಳಿದ್ದು, ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಶೇ.70ರಷ್ಟು ಸರಕು ಸಾಗಾಣೆ ರಸ್ತೆ ಸಾರಿಗೆಯನ್ನು ಅವಲಂಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ ಮೂರು ರೂಪಾಯಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದ್ದರೂ, ರಸ್ತೆ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಿ ಲೂಟಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಜ.3 ರಂದು ನಡೆದ ಸಂಘದ ಸಭೆಯಲ್ಲಿ ಪ್ರತಿಭಟನೆ ನಡಸಲು ತೀರ್ಮಾನಿಸಲಾಗಿತ್ತು. ಇದೀಗ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಆಂಬುಲೆನ್ಸ್, ಔಷಧಿ, ಆಸ್ಪತ್ರೆ, ಅಗತ್ಯ ವಸ್ತುಗಳ ವಾಹನಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೆಲ್ಲಾ ರಾಜಮಣಿ, ತಮಿಳುನಾಡು ಸಂಘದ ಡಿ. ಅಕ್ಬರ್, ಕೇರಳ ಸಂಘದ ಶಾಜು, ಆಂಧ್ರಪ್ರದೇಶದ ಬಾಷಾಬಾನ್ ಮತ್ತು ಮಹಾರಾಷ್ಟ್ರ ಸಂಘದ ಅಧ್ಯಕ್ಷ ಶಂಕರ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News