ದರ್ಶನ್ ಎ1 ಆರೋಪಿ ಎಂದು ಗುರುತಿಸುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು : ಜಿ.ಪರಮೇಶ್ವರ್

Update: 2024-09-03 12:53 GMT

ಡಾ.ಜಿ.ಪರಮೇಶ್ವರ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಆಧರಿಸಿ ದರ್ಶನ್ ಸೇರಿ ಯಾರನ್ನು ಎ1, ಎ2 ಆರೋಪಿಗಳನ್ನಾಗಿಸಬೇಕು ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಅವರ ಕುಟುಂಬಸ್ಥರು ನಮ್ಮಿಂದ ನ್ಯಾಯವನ್ನು ನಿರೀಕ್ಷೆ ಮಾಡಬಹುದು. ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ನ್ಯಾಯಾಲಯದಲ್ಲಿ ಸಹ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಸಿದ್ಧಾರ್ಥ ಟ್ರಸ್ಟ್‌ ಗೆ ಕೆಐಎಡಿಬಿ ನಿವೇಶನ ಹಂಚಿಕೆ ಕುರಿತು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿಲ್ಲವೆಂದು ಸಚಿವ ಎಂ.ಬಿ.ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಾದವರು ರಾಜ್ಯಪಾಲರು. ಸಾವಿರಾರು ಜನ ದೂರು ಕೊಡುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ. ಅನಾವಶ್ಯಕವಾಗಿ ಆಪಾದನೆ ಮಾಡುವುದು ಸರಿಯಲ್ಲ ಎಂದು ಜಿ.ಪರಮೇಶ್ವರ್ ಹೇಳಿದರು.

ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮೊದಲಿಂದಲೂ ಹೇಳುತ್ತಿದ್ದೇವೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾವು ಜನರ ಮುಂದೆ ಸತ್ಯಸತ್ಯಾತೆ ಇಡುತ್ತೇವೆ. ನಾವು ಯಾವುದನ್ನು ಕೂಡ ಕಾನೂನು ಬಾಹಿರವಾಗಿ ಮಾಡಿಲ್ಲ ಎಂಬುದನ್ನು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದೇವೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಬಿಟ್ ಕಾಯಿನ್, ವಾಲ್ಮೀಕಿ, ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮ ಸೇರಿದಂತೆ ಎಲ್ಲ ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ. ಎಸ್‍ಐಟಿಗೆ ವಹಿಸಿರುವ ಮತ್ತು ಸಿಐಡಿ ಕೈಗೊಂಡಿರುವ ಪ್ರಕರಣಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಈ ಎಲ್ಲ ಪ್ರಕರಣಗಳ ರಿವ್ಯೂವ್ ನಡೆಸಲು ಮುಂದಿನ ದಿನಗಳಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಹೈಕಮಾಂಡ್ ಭೇಟಿ ಸಂಪ್ರದಾಯ..!

ಸತೀಶ್ ಜಾರಕಿಹೊಳಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡುವುದು ಪಕ್ಷದ ಸಂಪ್ರದಾಯ. ಆ ಸಂಪ್ರದಾಯಕ್ಕೆ ಹೋಗಿರುತ್ತಾರೆ. ಎಲ್ಲದಕ್ಕೂ ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ. ಹೈಕಮಾಂಡ್ ಬೇರೆಬೇರೆ ಕೆಲಸಗಳನ್ನು ಒಪ್ಪಿಸಿರುತ್ತದೆ ಎಂದು ಹೇಳಿದರು.

ಇನ್‍ಸ್ಪೆಕ್ಟರ್‌ಗೆ ತರಾಟೆ..!

ಗೃಹ ಸಚಿವರ ಮನೆ ಬಳಿ ಮನವಿ ನೀಡಲು ಬಂದಿದ್ದವರನ್ನು ಕರೆದೊಯ್ದ ಸ್ಥಳೀಯ ಪೊಲೀಸರನ್ನು ಸಚಿವ ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಬಗೆಹರಿಯುತ್ತದೆ ಎಂಬ ಉದ್ದೇಶದಿಂದ ಬರುತ್ತಾರೆ. ನಮ್ಮ ಬಳಿಗೆ ಬಾರದಿದ್ದರೆ, ಇನ್ಯಾರ ಬಳಿ ಹೋಗಲು ಸಾಧ್ಯ. ಸುಮ್ಮನೆ ನಿಂತುಕೊಂಡು ನೋಡಬೇಕು. ಇನ್ನೊಮ್ಮೆ ಆ ರೀತಿ ನಡೆದುಕೊಳ್ಳಬಾರದು ಎಂದು ಸದಾಶಿವನಗರ ಠಾಣೆಯ ಇನ್‍ಸ್ಪೆಕ್ಟರ್‌ ಗೆ ತಾಕೀತು ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News