ಒಳಮೀಸಲಾತಿ: ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ ನ್ಯಾ. ನಾಗಮೋಹನ್ ದಾಸ್ ಆಯೋಗ

ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗವು ಸಿದ್ದಪಡಿಸಿರುವ 104 ಪುಟಗಳ ಮಧ್ಯಂತರ ವರದಿಯನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಲಾಯಿತು.
ವರದಿ ಸಲ್ಲಿಕೆ ಬಳಿಕ ಮಾತನಾಡಿದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್, ಎರಡು ತಿಂಗಳಿಗಿಂತ ಹೆಚ್ಚು ನಾನು ಹಾಗೂ ನನ್ನ ತಂಡ ಆಳವಾದ ಅಧ್ಯಯನ ನಡೆಸಿ 104 ಪುಟಗಳ ಒಳಮೀಸಲಾತಿ ಮಧ್ಯಂತರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ತರಾತುರಿ ಎನ್ನುವ ಪ್ರಶ್ನೆಯೇ ಇಲ್ಲ. ಮಧ್ಯಂತರ ವರದಿ ಕೊಡಿ ಎಂದು ಸರಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ನೀಡಿದ್ದೇವೆ ಎಂದು ಹೇಳಿದರು.
ಈ ಮಧ್ಯಂತರ ವರದಿಯನ್ನು ನೀಡಿರುವ ಹಂತದಲ್ಲಿ ಬೇರೆ ಯಾವ ವಿಚಾರವನ್ನು ಹೇಳಲು ಸಾಧ್ಯವಿಲ್ಲ. ಸರಕಾರದ ತೀರ್ಮಾನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಧ್ಯಂತರ ವರದಿ ನೀಡಿರುವುದು ಒಳ ಮೀಸಲಾತಿ ಜಾರಿಯ ವಿಳಂಬ ಧೋರಣೆಗೆ ಅನುಕೂಲ ಎಂಬುದೆಲ್ಲ ತಪ್ಪು. ಇದು ವಿಳಂಬ ನೀತಿಯ ಧೋರಣೆ ಅಲ್ಲವೇ ಅಲ್ಲ ಎಂದು ನಾಗಮೋಹನ್ ದಾಸ್ ಸ್ಪಷ್ಟಪಡಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು, ಅವರಿಗೆ ಶಾಶ್ವತವಾದ ಪರಿಹಾರವನ್ನು ಕೊಡಬೇಕು ಎಂಬುದು ನನ್ನ ಆಸೆಯಾಗಿದೆ. ಸರಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಸರಕಾರದ ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ನಾಗಮೋಹನ್ ದಾಸ್ ತಿಳಿಸಿದರು.
ಮಧ್ಯಂತರ ವರದಿಯಲ್ಲಿ ನೇಮಕಾತಿ ಬಗ್ಗೆ ಯಾವುದೇ ಸಲಹೆ ಕೊಟ್ಟಿಲ್ಲ. ವರದಿಯಲ್ಲಿ ಏನಿದೆ ಎಂಬುದಕ್ಕೆ ನಾನು ಉತ್ತರ ನೀಡಲು ಬರುವುದಿಲ್ಲ. ಇದನ್ನು ಸರಕಾರದ ಬಳಿಯೇ ಕೇಳಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.
ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಉಪಸ್ಥಿತರಿದ್ದರು.